ರೋಣ: ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವಂತೆ ತಾಲೂಕಿನ ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗದಗ ಡಿಡಿಪಿಐಗೆ 101 ತೆರೆದ ಅಂಚೆಪತ್ರ ಬರೆದೆ ಬೆನ್ನಲ್ಲೇ ತಾಪಂ ಇಒ, ಬಿಇಒ, ಲೋಕಾಯುಕ್ತ ಅಧಿಕಾರಿಗಳು ಶಾಲೆಗೆ ತೆರಳಿ ಗುತ್ತಿಗೆದಾರರ ಕರೆಸಿ ಶೌಚಾಲಯ ಪೂರ್ಣಗೊಳಿಸುವಂತೆ ಸೂಚಿಸಿದರು.
ಫೆ. 19ರಂದು ಕನ್ನಡಪ್ರಭ ಶೌಚಾಲಯಕ್ಕಾಗಿ 101 ಅಂಚೆಪತ್ರ ಚಳವಳಿ ಶೀರ್ಷಿಕೆಯಡಿ ವಿಸ್ತ್ರತ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಶಾಲೆಗೆ ಎಲ್ಲ ಅಧಿಕಾರಿಗಳು ದೌಡಾಯಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಶೀಘ್ರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.₹1 ಲಕ್ಷ ಅನುದಾನ: ರೋಣ ತಾಪಂ ಇಒ ಚಂದ್ರಶೇಖರ ಕಂದಕೂರ ಅವರು ಶಾಲೆಗೆ ಭೇಟಿ ನೀಡಿ, 2021ರಲ್ಲಿಯೇ ಅರ್ಧಕ್ಕೆ ನಿಂತಿರುವ ಕಾಮಗಾರಿ ಕೈಗೊಂಡ ಗುತ್ತಿಗೆದಾರರನ್ನು, ಗ್ರಾಪಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಮಾಹಿತಿ ಪಡೆದರು. ಶೌಚಾಲಯ ಕಾಮಗಾರಿ ಕೈಗೊಂಡು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು. ಸಮರ್ಪಕ ನೀರು ಪೂರೈಕೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು ಅನುದಾನ ಕೊರತೆ ಇದ್ದಲ್ಲಿ ಹೆಚ್ಚುವರಿಯಾಗಿ ₹1 ಲಕ್ಷ ಅನುದಾನವನ್ನು ಖಾತ್ರಿ ಯೋಜನೆಯಡಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ನೆಪ ಹೇಳದೆ ತುರ್ತಾಗಿ ಕಾಮಗಾರಿ ಪ್ರಾರಂಭಿಸಿ ವಾರದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಗ್ರಾಪಂ, ಜಿಪಂ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಸೋಮವಾರದಿಂದಲೇ ಕಾಮಗಾರಿ ಕೈಗೊಳ್ಳುವದಾಗಿ ಗುತ್ತಿಗೆದಾರರು, ಗ್ರಾಪಂ ಅಧಿಕಾರಿಗಳು ಭರವಸೆ ನೀಡಿದರು.
ಲೋಕಾಯುಕ್ತರ ಭೇಟಿ: ಲೋಕಾಯುಕ್ತ ಸಿಪಿಐ ಪರಮೇಶ್ವರ ಕವಟಗಿ ಅವರು ಗುರುವಾರ ಹೊಸಳ್ಳಿ ಗ್ರಾಮದ ಶಾಲೆಗೆ ಭೇಟಿ ನೀಡಿ, ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳೊಂದಿಗ ಚರ್ಚಿಸಿದರು. ಅರ್ಧಕ್ಕೆ ನಿಂತಿರುವ ಶೌಚಾಲಯದ ಕಾಮಗಾರಿ ಸ್ಥಳ ಪರಿಶೀಲಿಸಿದ ಅವರು, ಕಾಮಗಾರಿಗೆ ಬಿಡುಗಡೆ ಮಾಡಲಾದ ಒಟ್ಟು ಮೊತ್ತ, ಪಾವತಿಯಾದ ಬಿಲ್ಲು, ಬಾಕಿ ಹಣ ಎಷ್ಟು ಉಳಿದಿದೆ? ಮತ್ತು ಅರ್ಧಕ್ಕೆ ಕಾಮಗಾರಿ ಯಾಕೆ ನಿಂತಿದೆ? ಎಂಬುದರ ಕುರಿತು ಕಾಗದಗಳನ್ನು ಪರಿಶೀಲಿಸಿದರು.ಬಳಿಕ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ ಅವರು, ನಿಮಗೆ ಏನಾದರೂ ಸಮಸ್ಯೆ ಎದುರಾದಲ್ಲಿ ಲೋಕಾಯುಕ್ತ ಇಲಾಖೆ ಗಮನಕ್ಕೆ ತಂದಲ್ಲಿ, ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ ಎಂದು ಧೈರ್ಯ ಹೇಳಿ, ಈ ಕುರಿತು ವರದಿ ಸಿದ್ಧಪಡಿಸಿ ರಾಜ್ಯ ಲೋಕಾಯುಕ್ತರಿಗೆ ಕಳುಹಿಸುವುದಾಗಿ ತಿಳಿಸಿದರು.
ಕನ್ನಡಪ್ರಭ ಪತ್ರಿಕೆ ವರದಿ ನೋಡಿದ ತಕ್ಷಣವೇ ಶಾಲೆಗೆ ಭೇಟಿ ನೀಡಿ, ಅರ್ಧಕ್ಕೆ ನಿಂತಿರುವ ಶೌಚಾಲಯ ಕಾಮಗಾರಿಯನ್ನು ಸೋಮವಾರ (ಫೆ. 24) ದಿಂದ ಪ್ರಾರಂಭಿಸಿ, ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮತ್ತು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಪಂ ಪಿ.ಆರ್.ಇ.ಡಿ ಎಇಇ ಅವರೊಂದಿಗೂ ಚರ್ಚಿಸಲಾಗಿದೆ. ಹೆಚ್ಚುವರಿಯಾಗಿ ₹1 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗುವುದು ರೋಣ ತಾಪಂ ಇಒ ಚಂದ್ರಶೇಖರ ಕಂದಕೂರ ಹೇಳಿದರು.ಶೌಚಾಲಯವಿಲ್ಲದೇ ಶಾಲಾ ಮಕ್ಕಳು ತೀವ್ರ ತೊಂದರೆ ಎದುರಿಸುತ್ತಿದ್ದರು. ಈ ಕುರಿತು ಕನ್ನಡಪ್ರಭ ಪತ್ರಿಕೆ ಸವಿಸ್ತಾರವಾಗಿ ವರದಿ ಪ್ರಕಟಿಸಿ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯುವಂತೆ ಮಾಡಿತು. ಸೋಮವಾರದಿಂದಲೇ ಶೌಚಾಲಯ ಕಾಮಗಾರಿ ಪ್ರಾರಂಭಗೊಳ್ಳಲಿದೆ ಹೊಸಹಳ್ಳಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಶಿವನಗೌಡ ಜುಮ್ಮನಗೌಡ್ರ ಹೇಳಿದರು.