ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಎಚ್ಚರಿಕೆ
ಜಿಲ್ಲೆಯ ಕರಾವಳಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯ ಸಮಸ್ಯೆಯ ಕುರಿತು ವಾರದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಬೇಕು. ಕಾಲಮಿತಿಯಲ್ಲಿ ಕಾಮಗಾರಿ ಹಾಗೂ ಪೂರಕ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಟೋಲ್ ಬಂದ್ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ದಿವಗಿಯಲ್ಲಿ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಅಂದೋಲನದಲ್ಲಿ ಚತುಷ್ಪಥ ಕಾಮಗಾರಿಯ ಕುರಿತು ಹಲವಾರು ದೂರುಗಳು ಬಂದ ಸಂದರ್ಭದಲ್ಲಿ ಸಚಿವರು ಈ ಎಚ್ಚರಿಕೆ ನೀಡಿದರು.ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಎಂ. ಶಿವಕುಮಾರ, ಕೇವಲ 4 ಕಿ.ಮೀ. ಚತುಷ್ಪಥ ಕಾಮಗಾರಿ ಮಾತ್ರ ಬಾಕಿ ಇದೆ ಎಂದು ಹೇಳಿದ್ದು ತೀವ್ರ ಆಕ್ಷೇಪ ವ್ಯಕ್ತವಾಯಿತು. ಎಲ್ಲಾ ತಾಲೂಕುಗಳಲ್ಲಿ ಕಾಮಗಾರಿ ಬಾಕಿ ಇದೆ. ಕುಮಟಾದಲ್ಲಿ ಮಾನೀರಿನಿಂದ ಅಳ್ವೇಕೋಡಿವರೆಗೆ ಅರೆಬರೆ ಕಾಮಗಾರಿ ಆಗಿದೆ. ಕನಿಷ್ಠ ನಿರ್ವಹಣೆಯೂ ಇಲ್ಲ, ಅಪಘಾತಗಳಾಗಿ ಇನ್ನೂ ಎಷ್ಟು ಸಾವುನೋವುಗಳನ್ನು ನೋಡಬೇಕಿದೆ. ಯಾವಾಗ ಕಾಮಗಾರಿ ಪೂರ್ತಿ ಮಾಡುತ್ತೀರಿ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಈ ಬಗ್ಗೆ ಸಚಿವ ಲಕ್ಷ್ಮಣ ಸವದಿ ನಿರ್ದೇಶನ ನೀಡಿ, ವಾರದೊಳಗೆ ತಾಲೂಕು ಮಟ್ಟದಲ್ಲಿ ಚತುಷ್ಪಥ ಕಾಮಗಾರಿ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದು ಸೂಚಿಸಿದರಲ್ಲದೇ ನಿಗದಿತ ವೇಳೆಗೆ ಕಾಮಗಾರಿ ಮುಗಿಯದಿದ್ದಲ್ಲಿ ಟೋಲ್ ಬಂದ್ ಮಾಡುವ ಎಚ್ಚರಿಕೆ ನೀಡಿದರು.
ಪ್ರಜಾಸೇವಾ ಸಭೆಗಳಿಂದ ಗರಿಷ್ಟ ೧೫ ದಿನಗಳಲ್ಲಿ ಕಾನೂನು ಚೌಕಟ್ಟಿನಡಿ ಬಗೆಹರಿಯದಿದ್ದರೆ ಅರ್ಜಿದಾರನಿಗೆ ಹಿಂಬರಹ ಕೊಡಲೇಬೇಕು. ಯಾವುದೇ ಕುಂಟು ನೆಪದಿಂದ ತಪ್ಪು ಹಿಂಬರಹ ನೀಡಿದರೆ ಸಹಿಸುವುದಿಲ್ಲ. ಈ ಸಭೆಗಳ ಅರ್ಜಿ ವಿಲೇವಾರಿ ಸಂಬಂಧಿಸಿ ಜಿಲ್ಲಾ ಮಟ್ಟದಲ್ಲಿ ಸಭೆ ಮಾಡಿ ಸ್ವತಃ ಅವಲೋಕಿಸಲಿದ್ದೇನೆ. ಮುಂದಿನ ಕೆಡಿಪಿ ಸಭೆಗಳಲ್ಲಿ ಈ ಬಗ್ಗೆ ಸಾರ್ವಜನಿಕರು ನನ್ನನ್ನು ಪ್ರಶ್ನಿಸುವಂತಹ ಸಂದರ್ಭ ಬರಕೂಡದು ಎಂದು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಎಚ್ಚರಿಸಿದರು.
ರಾಜ್ಯದ ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಇದೇ ಪ್ರಥಮ ಬಾರಿಗೆ ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸಲಾಗಿದ್ದು ಒಟ್ಟೂ ೩೨೦೦೦ ಕೋಟಿ ಸಮಗ್ರ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು ಇದರಲ್ಲಿ ಉತ್ತರ ಕನ್ನಡ ಜಿಲ್ಲೆಗೆ ೧೦ ಸಾವಿರ ಕೋಟಿ ರೂ.ಗಳ ಯೋಜನೆ ನಿಗದಿಸಲಾಗಿದೆ ಎಂದರು. ಇದು ಡಿಕೆ.ಶಿವಕುಮಾರ ನೇತೃತ್ವದ ಸರ್ಕಾರದ ದೂರದರ್ಶಿತ್ವ ತೋರಿಸುತ್ತದೆ ಎಂದರು.
ಸಭೆ ಉದ್ದೇಶಿಸಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪ್ರಜಾಸೇವಾ ಅಂದೋಲನ ಹೆಚ್ಚಿನಂಶ ಸ್ಥಳದಲ್ಲೇ ಸಮಸ್ಯೆ ಬಗೆಹರಿಸುತ್ತಿದ್ದು ಉತ್ತಮವಾಗಿದೆ. ಆದರೆ ಪ್ರವಾಸೋದ್ಯಮ ಬೆಳವಣಿಗೆ, ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಅತಿಕ್ರಮಣದಾರರ ಸಮಸ್ಯೆ, ಜಿಪಿಎಸ್ ಆದವರಿಗೆ ಸರ್ಕಾರದ ಮನೆ ಮಂಜೂರಿ ಮುಂತಾದ ವಿಷಯಗಳ ಬಗ್ಗೆ ಸೂಕ್ತ ಕ್ರಮವಾಗಬೇಕಿದೆ. ಜಿಲ್ಲೆಯ ಘಟ್ಟದ ಕೆಳಭಾಗದಲ್ಲಿ ವಾಕರಸಾ ವಿಭಾಗೀಯ ಘಟಕವಾಗಬೇಕು. ಗೋಕರ್ಣ ರಸ್ತೆ ಅಗಲಗೊಳಿಸಬೇಕು ಎಂದು ಸಚಿವರಲ್ಲಿ ವಿನಂತಿಸಿದರು.
ಮಾಜಿ ಜಿಪಂ ಸದಸ್ಯ ಗಜಾನನ ಪೈ, ಯಾಣಕ್ಕೆ ರೋಪ್‌ವೇ ಅತ್ಯಗತ್ಯವಿದೆ ಎಂದರು. ಕುಮಟಾದಲ್ಲಿ ಆರಂಭಗೊಂಡಿರುವ ಟ್ರಾಮಾ ಸೆಂಟರ್ ಗೆ ಜಿಲ್ಲಾಸ್ಪತ್ರೆಯ ವೈದ್ಯರ ಸೇವೆಯನ್ನಾದರೂ ಒದಗಿಸಿ, ಅಥವಾ ಜಿಲ್ಲಾಸ್ಪತ್ರೆಯ ಒಂದು ವಿಭಾಗವನ್ನಾದರೂ ಇಲ್ಲಿ ಒದಗಿಸಬೇಕು ಎಂದರು. ಕತಗಾಲದಲ್ಲಿ ಇರುವ ಆಂಬುಲೆನ್ಸನ್ನು ಹಗಲಿನಲ್ಲಿ ಪಿಎಚ್‌ಸಿ ಗೆ ಹಾಗೂ ಉಳಿದ ಸಮಯದಲ್ಲಿ ಅಲ್ಲಿನ ಪೊಲೀಸ್ ಚೌಕಿಯಲ್ಲಿರಿಸಿದರೆ ೨೪ ಗಂಟೆಯೂ ಜನರಿಗೆ ಸೇವೆ ಲಭ್ಯವಾಗುತ್ತದೆ ಎಂದರು.
ಭಾಸ್ಕರ ಪಟಗಾರ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕು, ಆದರೆ ಮಳೆಗಾಲದಲ್ಲಿಯೇ ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಿದರೆ ಹೇಗೆ?ಎಂದು ಪ್ರಶ್ನಿಸಿದರು. ಕುಮಟಾದಲ್ಲಿ ತೋಟಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪಿಸುವಂತೆ ಎವಿಪಿ ರೈತಸೇವಾ ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ ಇಟ್ಟ ಬೇಡಿಕೆಗೆ ಸೂಕ್ತ ಪ್ರಸ್ತಾವನೆಯನ್ನು ಬಾಗಲಕೋಟ ತೋಟಗಾರಿಕೆ ವಿವಿಗೆ ಕಳುಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಕಲಭಾಗ ಪಂಚಾಯಿತಿಯ ಹಂತಿಮಠ ಜನತಾಪ್ಲಾಟ್ ನವರ ಸರ್ವೆ ಪೋಡಿ ಹಾಗೂ ಇಸ್ವತ್ತು ಸಮಸ್ಯೆ ಬಗೆಹರಿಸುವಂತೆ ಪ್ರವೀಣಕುಮಾರ ಶೆಟ್ಟಿ ಹಾಗೂ ಸ್ಥಳೀಯರು ಮನವಿ ಸಲ್ಲಿಸಿದರು.
ಸಭೆಯಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ೪೧೨ ಅರ್ಜಿಗಳನ್ನು ಸ್ವೀಕರಿಸಲಾಯಿತು.ಅರಣ್ಯ ಇಲಾಖೆ, ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು, ಜಾಬ್ ಕಾರ್ಡ್ ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಎಎಸ್‌ಪಿ ರಾನು ಗುಪ್ತಾ, ಡಿಎಫ್‌ಒ ಯೋಗೇಶ ಸಿಕೆ., ಉಪವಿಭಾಗಾಧಿಕಾರಿ ಪಿ.ಶ್ರವಣಕುಮಾರ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಗ್ಯಾರಂಟಿ ಸಮಿತಿಯ ತಾಲೂಕಾಧ್ಯಕ್ಷ ಅಶೋಕ ಗೌಡ ಇದ್ದರು. ತಹಸೀಲ್ದಾರ ಶ್ರೀಕೃಷ್ಣ ಕಾಮಕರ ಸ್ವಾಗತಿಸಿದರು. ಯೋಗೇಶ ನಾಯ್ಕ ನಿರ್ವಹಿಸಿದರು.