ಗದಗ: ನಗರದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದಿಂದ ಕೊಡಮಾಡುವ ಮಹಾಮಾನವತಾವಾದಿ ಪ್ರಶಸ್ತಿಯನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಮೀನಾಕ್ಷಿ ಕೃಷ್ಣ ಬೈರೇಗೌಡ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಹೇಳಿದರು.
ಅವರು ಭಾನುವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏ. 29ರಂದು ಸಂಜೆ 7.30ಕ್ಕೆ ಜರುಗುವ ಮಹಾಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಸಮಾರಂಭದಲ್ಲಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹಾಗೂ ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಕರ್ನಾಟಕ ಗಾಂಧಿ ಸ್ಮಾರಕದ ಅಧ್ಯಕ್ಷರು ಹಾಗೂ ಶಿಕ್ಷಣ ತಜ್ಞ ನಾಡೋಜ ಡಾ. ವುಡೇ ಪಿ. ಕೃಷ್ಣ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಮಾಜಿ ವಿಪ ಸದಸ್ಯ ಮೋಹನ ಲಿಂಬಿಕಾಯಿ ಪಾಲ್ಗೊಳ್ಳುವರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರು ದ್ಯಾಂಪೂರ ಚನ್ನಕವಿಗಳು ಹಾಗೂ ವಿಶ್ವಗುರು ಬಸವಣ್ಣನವರು ಗ್ರಂಥಗಳನ್ನು ಲೋಕಾರ್ಪಣೆಗೊಳಿಸುವರು ಎಂದು ಹೇಳಿದರು.1997ರಲ್ಲಿ ಸ್ಥಾಪಿತವಾದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನವು 1998ರಿಂದ ಮಹಾಮಾನವತಾವಾದಿ ಬಸವೇಶ್ವರರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸುವುದರ ಮೂಲಕ ಅಂದಿನಿಂದ ಈವರೆಗೆ ಸಮಾಜಕ್ಕೆ ಅರ್ಪಿತ ಆದರ್ಶ ದಂಪತಿಗಳು, ವಿಕಲಾಂಗ ಚೇತನ ಹಾಗೂ ಪರಿಸರವಾದಿಗಳಿಗೆ ಹೀಗೆ ಮೂರು ವಿಭಾಗದಲ್ಲಿ 26 ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತ ಬರಲಾಗಿದೆ ಎಂದು ವಿವರಿಸಿದರು.
ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ಮಾತನಾಡಿ, ಏ. 30ರಂದು ಬಸವ ಜಯಂತಿ ಅಂಗವಾಗಿ ಬೆಳಗ್ಗೆ 9ಕ್ಕೆ ತೋಂಟದಾರ್ಯ ಮಠದಿಂದ ಮಹೇಂದ್ರಕರ್ ಸರ್ಕಲ್, ಟಾಂಗಾ ಕೂಟ, ಬಸವೇಶ್ವರ ಸರ್ಕಲ್, ಕೆ.ಎಚ್. ಪಾಟೀಲ ಸರ್ಕಲ್ ಹಾಗೂ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಪುನಃ ತೋಂಟದಾರ್ಯ ಮಠದವರೆಗೆ ಭವ್ಯ ಮೆರವಣಿಗೆ ಜರುಗಲಿದೆ ಎಂದರು.ಸಂಜೆ 7.30ಕ್ಕೆ ಬಸವ ಜಯಂತಿ ಕಾರ್ಯಕ್ರಮ ಜರುಗಲಿದ್ದು, ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಜಿ.ಬಿ. ಪಾಟೀಲ ಹಾಗೂ ಧಾರವಾಡದ ವಿಜಯಕುಮಾರ ಕಮ್ಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ವೇಳೆ ಲಿಂಗಾಯತ ಚಳವಳಿ2017-18 ಹಾಗೂ ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ, ನಿರಂಜನಯ್ಯ ಲಿಂಬಯ್ಯಸ್ವಾಮಿಮಠ ಕುಮಾರ ತೋಟದ, ಅಮರೇಶ ಅಂಗಡಿ, ಶಾಂತರಾಜ ಓದುನವರ, ಬಸಣ್ಣ ಗಾಂಜಿ ಮುಂತಾದವರು ಹಾಜರಿದ್ದರು.