ಗಜೇಂದ್ರಗಡ: ರಾಜ್ಯದ ಸಾಮಾಜಿಕ ದೌರ್ಜನ್ಯ ಹಾಗೂ ಬಹಿಷ್ಕಾರಕ್ಕೊಳಗಾದ ಮತ್ತು ಆರ್ಥಿಕವಾಗಿ ಪರಾವಲಂಬಿಗಳಾದ ದಲಿತರು, ದಲಿತ ಮಾಜಿ ದೇವದಾಸಿಯರು, ಒಂಟಿ ಮಹಿಳೆಯರು ಹಾಗೂ ಮಸಣ ಕಾರ್ಮಿಕರ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಡಿ. ೨೦ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಸಂಟನೆಯ ಜಿಲ್ಲಾ ಉಪಾಧ್ಯಕ್ಷೆ ಮಾಳವ್ವ ಅರಳಿಗೀಡದ ತಿಳಿಸಿದರು.
ಆರ್ಥಿಕ ದುಸ್ಥಿತಿ ಮತ್ತು ಹಿರಿತನದ ಆಧಾರದಲ್ಲಿ ಕಾಲಮಿತಿಯೊಳಗೆ ಸ್ವಾವಲಂಬಿ ಬದುಕನ್ನು ಸಾಧಿಸುವಂತೆ ಪುನರ್ವಸತಿಗೆ ಕ್ರಮ ವಹಿಸಬೇಕು. ಇದಕ್ಕಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉಪಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್‌ನ ಶೇ. ೪೦ರಷ್ಟು ಅನುದಾನವನ್ನು ಮೀಸಲಿಡಬೇಕು. ಒಂಟಿ ಮಹಿಳೆಯರು, ಮಸಣ ಕಾರ್ಮಿಕರು ಮತ್ತು ಮಾಜಿ ದೇವದಾಸಿಯರಿಗೆ ಹಾಗೂ ಬಡ ದಲಿತರಿಗೆ ಮಾಸಿಕ ಸಾಮಾಜಿಕ ಪಿಂಚಣಿಯನ್ನು ₹೬೦೦೦ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದರು.ದೇವದಾಸಿ ಮಕ್ಕಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾದರ ಮಾತನಾಡಿ, ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳಿಗೆ, ಒಂಟಿ ಮಹಿಳೆಯರು, ವಿಧವಾ ಮಹಿಳೆಯರು ಮಸಣ ಕಾರ್ಮಿಕರ ಮಕ್ಕಳ ಮದುವೆಗೆ ಪ್ರೋತ್ಸಾಹಧನವನ್ನು ₹೧೦ ಲಕ್ಷಕ್ಕೆ ಹೆಚ್ಚಿಸಬೇಕು.
ಅವಿವಾಹಿತರಾಗಿ ಉಳಿದವರಿಗೆ ಅದೇ ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಲಾಗುವುದು ಎಂದ ಅವರು, ಮಾಜಿ ದೇವದಾಸಿಯರು, ಅವರ ಮಕ್ಕಳು ಡಿ. ೧೯ರಂದು ರಾತ್ರಿ ಬಸ್, ರೈಲು ಹಾಗೂ ಖಾಸಗಿ ವಾಹನ ಮೂಲಕ ಬರಬೇಕು ಎಂದರು.ಈ ವೇಳೆ ಕನಕಪ್ಪ ರಾಂಪೂರ, ಗಿರಿಜವ್ವ ಪೂಜಾರ, ಆನಂದ ಮಾದರ, ಅಂದವ್ವ ನಂದಾಪೂರ, ಶಾಂತವ್ವ ಮಾದರ, ಕನಕರಾಯ ಹಾದಿಮನಿ, ಬಸವರಾಜ ಮಾದರ ಸೇರಿ ಇತರರು ಇದ್ದರು.