ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ, ವಿಶ್ವಕರ್ಮ ಸಮುದಾಯದ ಪರಂಪರೆ ಮತ್ತು ನಾಡಿಗೆ ನೀಡಿದ ಕೊಡುಗೆ ಅನನ್ಯವಾದದ್ದು. ಸಮುದಾಯದ ಸಂಘಟನೆಗೆ ಮೊದಲ ಆದ್ಯತೆ ನೀಡಬೇಕು. ಹಿಂದುಳಿದ ವರ್ಗಗಳು ಸಂಘಟಿತರಾಗದಿದ್ದರೆ ಸರ್ಕಾರದ ಸವಲತ್ತುಗಳನ್ನು ಪಡೆಯುವುದು ಕಷ್ಟ ಸಾಧ್ಯ. ಒಡೆದು ಹೋದ ಮನಸ್ಸುಗಳನ್ನು ಒಂದುಗೂಡಿಸುವುದು ಸಂಘಟನೆಯ ಆದ್ಯ ಕರ್ತವ್ಯವಾಗಬೇಕು ಎಂದರು.
ಸಂಘಟನೆ ಎಲ್ಲ ಹಂತಗಳಲ್ಲಿ ಬೆಳವಣಿಗೆಗೆ ಅನುಕೂಲ ಕಲ್ಪಿಸುತ್ತದೆ. ವ್ಯಕ್ತಿಗತವಾದ ಆಲೋಚನೆಗಳಿಗಿಂತ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುವ ಚಿಂತನೆ ಅಗತ್ಯ ಎಂದು ತಿಳಿಸಿದರು.ಕಲಬುರಗಿ ದೊಡ್ಡಪೇಟೆಯ ಏಕದಂಡಿ ಮಠದ ದೊಡ್ಡೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನಾಡಿನಾದ್ಯಂತ ಇರುವ ವಿಶ್ವಕರ್ಮ ಸಮುದಾಯ ಪೌರಾಣಿಕವಾಗಿ ಮಹತ್ವದ ಸ್ಥಾನಮಾನ ಹೊಂದಿದೆ. ಕುಶಲಕರ್ಮಿ ಜನರ ಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಗಳಿಗೆ ಅವಕಾಶ ದೊರೆಯಬೇಕು ಎಂದರು.
ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ವಿಶ್ವಕರ್ಮ ಸಮುದಾಯ ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಪ್ರತಿಷ್ಠೆ ಉಳಿಸಿಕೊಂಡಿದೆ ಎಂದು ಹೇಳಿದರು.
ಮಹಾಸಭಾ ತಾಲೂಕು ಅಧ್ಯಕ್ಷ ಬಿ.ಎ.ಕೇಶವಾಚಾರ್ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ವೈದ್ಯ ಡಾ.ಟಿ.ಎಚ್.ಆಂಜನಪ್ಪ, ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ನಾಗರತ್ನಮ್ಮ ಸೇರಿದಂತೆ ತಾಲೂಕು ವಿಶ್ವಕರ್ಮ ಮಹಾ ಸಭಾ ಪದಾಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು.