ಕನ್ನಡಪ್ರಭ ವಾರ್ತೆ ಅಥಣಿ
ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗರಾಜ ಬಿರಾದಾರ ಪಾಟೀಲ 625/ 625 ಅಂಕ ಪಡೆಯುವ ಮೂಲಕ ರಾಜ್ಯಮಟ್ಟದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾಳೆ. ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ತಾಲೂಕಿನ ಐಗಳಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ವಸತಿ ನಿಲಯದ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದ ಬಡ ಕುಟುಂಬದ ವಿದ್ಯಾರ್ಥಿ ದಶರಥ ಶಿವಾಜಿ ಬೋಸಲೆ 625ಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಈ ವಿದ್ಯಾರ್ಥಿಗಳ ಸಾಧನೆಯನ್ನು ಶಾಸಕ ಲಕ್ಷ್ಮಣ ಸವದಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪಾಲಕರು ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಮಗಳ ಸಾಧನೆಯ ಬಗ್ಗೆ ತಂದೆ ನಾಗಪ್ಪ ಮತ್ತು ತಾಯಿ ವಿನೋದಾ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿತು ನಮ್ಮ ಮಗಳು ರಾಜ್ಯಕ್ಕೆ ಪ್ರಥಮ ಬಂದಿರುವುದು ನಮಗೆ ಹೆಮ್ಮೆ ವಿಷಯ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳ ಸಾಧನೆ ನಮಗೆ ಹರ್ಷ ತಂದಿದೆ. ನಮ್ಮ ತಾಲೂಕಿಗೆ ಒಳ್ಳೆಯ ವಿದ್ಯಾರ್ಥಿ. ಹಿಂದೆ ಟ್ಯಾಲೆಂಟ್ ಚಾಂಪ್ ಎಂಬ ಪರೀಕ್ಷೆಯಲ್ಲಿ 21ನೇ ರ್‍ಯಾಂಕ್ ಪಡೆದಿರುವ ವಿದ್ಯಾರ್ಥಿನಿ ಆಕೆ. ಬೆಳಗಾವಿ ಜಿಲ್ಲೆಗೆ ಈ ವಿದ್ಯಾರ್ಥಿನಿ ಪ್ರಥಮ ಬಂದಿದ್ದಾಳೆ. ನಮ್ಮ ತಾಲೂಕಿಗೆ ವಿದ್ಯಾರ್ಥಿನಿ ಮಾದರಿಯಾಗಿದ್ದಾಳೆ. ಎಸ್ಎಸ್ಎಲ್ಸಿ ಪರೀಕ್ಷೆ ಮುಂಚಿತವಾಗಿ ಹಲವು ರೂಪುರೇಷೆಗಳನ್ನು ಸಿದ್ಧಪಡಿಸಿದ್ದರಿಂದ ಇಂತಹ ಸಾಧನೆಗೆ ನಮ್ಮ ತಾಲೂಕಿನಲ್ಲಿ ಸಫಲವಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದದ್ದು ನಮ್ಮ ಹೆಮ್ಮೆ ಎಂಬುದನ್ನು ತಿಳಿಸಿದರು.------------------
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕು. ಪ್ರಾರ್ಥನಾ ನಾಗಪ್ಪ ಬಿರಾದಾರ ಮನೆಗೆ ತೆರಳಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಆರ್. ಮುಂಜೆ ಹಾಗೂ ಅವರ ಸಿಬ್ಬಂದಿ ಸನ್ಮಾನಿಸಿ ಅಭಿನಂದಿಸಿದರು.
ಬಾಕ್ಸ್
ಅಥಣಿ: ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ಹಾಗೂ ಸಿಬ್ಬಂದಿ ವಿದ್ಯಾರ್ಥಿನಿ ಮನೆಗೆ ತೆರಳಿ ಸಿಹಿ ಹಂಚಿ ಸನ್ಮಾನಿಸಿ ಅಭಿನಂದಿಸಿದರು.
ನನ್ನ ಈ ಸಾಧನೆ ಹಿಂದೆ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಇದೆ. ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ, ಶಿಕ್ಷಕರು ಪಾಠ ಮಾಡುವಾಗ ಏಕಾಗ್ರತೆಯಿಂದ ಆಲಿಸುತ್ತಿದ್ದೆ. ಮನೆಗೆ ಬಂದ ನಂತರ ಮತ್ತೊಮ್ಮೆ ಅದನ್ನು ಓದಿ ಬರೆದುಕೊಳ್ಳುತ್ತಿದ್ದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುತ್ತಿದ್ದೆ. ಆದ್ದರಿಂದ ಇಷ್ಟೊಂದು ಅಂಕ ಪಡೆಯಲು ಸಾಧ್ಯವಾಯಿತು. ನಾನು ಮುಂದೆ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುವ ಕನಸು ಹೊಂದಿದ್ದೇನೆ. ನನ್ನ ಸಾಧನೆಯನ್ನು ಕಂಡು ಶಾಲೆಯ ಶಿಕ್ಷಕರು, ಕೇತ್ರ ಶಿಕ್ಷಣ ಅಧಿಕಾರಿಗಳು ಮನೆಗೆ ಬಂದು ಸಿಹಿ ಹಂಚಿ ಸನ್ಮಾನಿಸಿರುವುದು ನನಗೆ ಖುಷಿ ತಂದಿದೆ. ಅವರೆಲ್ಲರಿಗೂ ನಮ್ಮ ಕುಟುಂಬದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದಳು.
ಕೋಟ್