ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಾಜಮುಡಿ ಬ್ರಹ್ಮೋತ್ಸವದ ಆರನೇ ತಿರುನಾಳ್ ಅಂಗವಾಗಿ ನಡೆದ ಅಷ್ಠತೀರ್ಥೋತ್ಸವದ ಧಾರ್ಮಿಕ ಕೈಂಕರ್ಯಗಳು ಬೆಳಗಿನ 7 ಗಂಟೆಗೆ ಆರಂಭವಾದವು. ಮಕ್ಕಳಭಾಗ್ಯ ಅಪೇಕ್ಷಿತ ದಂಪತಿಗಳು ಹರಕೆಕಟ್ಟಿಕೊಂಡು ಸ್ವಾಮಿಯ ಪಾದುಕೆಯಹಿಂದೆ ಸಾಗಿಬಂದರೆ ಸಹಸ್ರಾರು ಭಕ್ತರು ತೊಟ್ಟಿಲಮಡು ಜಾತ್ರೆಯಲ್ಲಿ ಪಾಲ್ಗೊಂಡರು.
ವೇದಾಂತ ದೇಶಿಕರ ಸನ್ನಿಧಿಗೆ ಸ್ವಾಮಿಯ ಪಾದುಕಾ ಪಲ್ಲಕ್ಕಿಯ ಉತ್ಸವ ನಡೆದ ನಂತರ 9 ಗಂಟೆಗೆ ವಜ್ರ ಖಚಿತ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರ ಉತ್ಸವ ಕಲ್ಯಾಣಿಗೆ ನೆರವೇರಿತು.ನಂತರ ಗಜೇಂದ್ರವರದನ ಸನ್ನಿಧಿಯ ಮುಂಭಾಗದಯಲ್ಲಿ ವೇದ ಘೋಷದೊಂದಿಗೆ ಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರಿದ ನಂತರ ಅಷ್ಠತೀರ್ಥೋತ್ಸವದ ಕಾರ್ಯಕ್ರಮಗಳು ಆರಂಭವಾದವು. ಗೃಹಿಣಿಯರು ಮಡಿಲುತುಂಬಿಕೊಂಡು ಕಲ್ಯಾಣಿಯಲ್ಲಿ ಪವಿತ್ರ ಸ್ನಾನ ಮಾಡಿದರು.
ರಾಮಾನುಜರ ಸನ್ನಿಧಿಯ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್, ಸ್ಥಾನೀಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಮುಕುಂದನ್ ಕರಗಂರಾಮಪ್ರಿಯ ಸೇರಿದಂತೆ ವೇದ ಪಾರಾಯಣ ಕೈಂಕರ್ಯಪರರು, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ದೇವಾಲಯದ ಇಒ ಎನ್.ಎಸ್ ಶೀಲಾ, ಗ್ರಾಮ ಆಡಳಿತಾಧಿಕಾರಿ ರಮೇಶ್ ಭಾಗವಹಿಸಿದ್ದರು.
ಬೆಳಗ್ಗೆ 10.30ಕ್ಕೆ ದೇವಾಲಯದಿಂದ ಪಲ್ಲಕ್ಕಿಯಲ್ಲಿ ಹೊರಟ ಸ್ವಾಮಿಯ ಸ್ವರ್ಣಪಾದುಕೆಗೆ ಚೆಲುವ ದೈವೀವನದ ಮಧ್ಯೆ ಇರುವ ವೇದಪುಷ್ಕರಣಿ, ಶ್ರೀರಾಮ ಸೀತಾಮಾತೆಯ ದಾಹತಣಿಸಲು ಬಾಣಬಿಟ್ಟು ಹೆಬ್ಬಂಡೆಗಳ ನಡುವಿನಿಂದ ನೀರುಕ್ಕಿಸಿದ ದನುಷ್ಕೋಟಿ, ಬೆಟ್ಟಗುಡ್ಡಗಳಿಂದ ಹರಿಯುವ ಯಾದವಾತೀರ್ಥ, ಬೆಟ್ಟಗಳಮಧ್ಯೆ ಇರುವ ದರ್ಭತೀರ್ಥ, ಪಲಾಶತೀರ್ಥ, ಪದ್ಮತೀರ್ಥ, ಸರ್ಕಾರಿ ಬಾಲಕರಶಾಲೆ ಹಿಂಭಾಗವಿರುವನರಸಿಂಹತೀರ್ಥ, ವೈಕುಂಠವಾಸಿಯಾದವರಿಗೆ ಮೋಕ್ಷ ಕರುಣಿಸುವ ನಂಬಿಕೆಯಿರುವ ನಾರಾಯಣ ತೀರ್ಥಗಳಲ್ಲಿ ಅಭಿಷೇಕ ನೆರವೇರಿಸಲಾಯಿತು.
ಇದೇ ವೇಳೆ ಸಿಹಿತಿನಿಸು ಮತ್ತು ಆಟಿಕೆಗಳ ಅಂಗಡಿಗಳಿಗೆ ಬರ್ಜರಿ ವ್ಯಾಪಾರ ನಡೆಯಿತು. ವಿಷ್ಣುಸಹಸ್ರನಾಮ ಪಾರಾಯಣದೊಂದಿಗೆ ಸಾಗಿದ ಪಾದುಕೆ ಯೋಗಾನರಸಿಂಹನಬೆಟ್ಟದ ಗಿರಿಪ್ರದಕ್ಷಿಣೆಯೊಂದಿಗೆ ರಾತ್ರಿ 9ಕ್ಕೆ ದೇವಾಲಯ ತಲುಪಿ ಅಷ್ಠತೀರ್ಥೋತ್ಸವ ಮುಕ್ತಾಯವಾಯಿತು.