ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದ ಶೂಟಿಂಗ್ ಪ್ರದೇಶದಲ್ಲಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿಗಳು ದರ್ಶನ ನೀಡಿದ್ದು, ಪ್ರವಾಸಿಗರು ತಮ್ಮ ಕ್ಯಾಮೆರಾದ ಹಾಗೂ ಮೊಬೈಲ್‌ನಲ್ಲಿ ವಿವಿಧ ಭಂಗಿಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ನಾಲ್ಕು ಮುದ್ದಾದ ಮರಿಗಳ ಜೊತೆ ಹುಲಿ ಕಂಡ ಪ್ರವಾಸಿಗರು ಫುಲ್ ಖುಷ್ ಜೊತೆಗೆ ನಿಜಕ್ಕೂ ಪ್ರವಾಸಿಗರಿಗೆ ರಸದೌತಣ ಉಂಟಾಗಿದೆ. ಕೆಲ ಸಮಯದಲ್ಲಿ ಸಫಾರಿಗೆ ಹೋದಾಗ ಒಂದು ಹುಲಿ ದರ್ಶನವಾಗೋದೆ ಇಲ್ಲ. ಆದರೆ ನಾಲ್ಕು ಮರಿ ಹುಲಿಗಳು ಮಾತ್ರ ಮಲಗಿದ್ದ ತಾಯಿ ಹುಲಿಗಳ ಬಳಿ ಬಂದು ತಾಯಿ ಜೊತೆ ಮುದ್ದಾಡಿದ್ದು ಕೂಡ ಅಪರೂಪ ಎಂಬಂತೆ ಗೋಚರಿಸಿವೆ. ಐದು ಹುಲಿಗಳು ಸಫಾರಿ ವಲಯ ರಸ್ತೆ ಬದಿಯ ಪೊದೆ ಬಳಿ ತಾಯಿ ಇದ್ದಾಗ ಹಿಂದಿನಿಂದ ನಾಲ್ಕು ಮರಿಗಳು ಒಂದೊಂದಾಗಿ ಬಂದು ಪ್ರವಾಸಿಗರಿಗೆ ಫೋಸು ನೀಡಿವೆ ಎಂದು ಬಂಡೀಪುರ ವಲಯ ಅರಣ್ಯಾಧಿಕಾರಿ ಮಹದೇವ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.