ಪಾರದರ್ಶಕ ಚುನಾವಣೆಗೆ ತರಬೇತಿ ಅವಶ್ಯಕ: ವಿಶ್ವನಾಥ ಪಾಟೀಲ

KannadaprabhaNewsNetwork | Published : Oct 7, 2024 1:40 AM

ಸಾರಾಂಶ

ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಉತ್ತಮ ತರಬೇತಿಗಳನ್ನು ಜಿಲ್ಲೆಯ ಸಹಕಾರಿಗಳಿಗೆ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಸಹಕಾರ ಸಂಘಗಳ ಅಧಿಕಾರಿಗಳು, ಮುಖ್ಯಕಾರ್ಯನಿರ್ವಾಹಕರುಗಳಿಗೆ ರಾಜ್ಯ ಮಟ್ಟದ ವಿಶೇಷ ಸಹಕಾರ ತರಬೇತಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪಾರದರ್ಶಕ ಸಹಕಾರ ಸಂಘಗಳ ಚುನಾವಣೆಗೆ ತರಬೇತಿ ಅವಶ್ಯಕ ಎಂದು ಆರ್.ಕೆ.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ವಿಶ್ವನಾಥ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಖಾಸಗಿ ರೆಸ್ಟೋರೆಂಟೊಂದರಲ್ಲಿ ನಡೆದ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿಗಳು, ಸಹಾಯಕ ರಿಟರ್ನಿಂಗ್ ಅಧಿಕಾರಿಗಳು, ಪರಿಶೀಲನಾ ಅಧಿಕಾರಿಗಳು ಮತ್ತು ಮುಖ್ಯಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಉತ್ತಮ ತರಬೇತಿಗಳನ್ನು ಜಿಲ್ಲೆಯ ಸಹಕಾರಿಗಳಿಗೆ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ಕೊಪ್ಪಳದ ನಮ್ಮ ಜಿಲ್ಲಾ ಸಹಕಾರ ಯೂನಿಯನ್ ಕಾಲ ಕಾಲಕ್ಕೆ ಸಹಕಾರ ಸಂಘಗಳ ಕಾಯ್ದೆಯಲ್ಲಿ ಬದಲಾವಣೆಯಾದ ವಿಷಯಗಳ ಕುರಿತು ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಿಬ್ಬಂದಿಗೆ ಹಾಗೂ ಆಡಳಿತ ಮಂಡಳಿಗೆ ಪರಿಣಾಮಕಾರಿ ತರಬೇತಿ ಹಮ್ಮಿಕೊಳ್ಳುತ್ತಾ ಜಿಲ್ಲೆಯಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸುತ್ತಾ ಬಂದಿದೆ. ಜಿಲ್ಲೆಯ ಸಹಕಾರಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಮನ್ವಯಾಧಿಕಾರಿ ಶರಣಬಸಪ್ಪ ಕಾಟ್ರಳ್ಳಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ಮಹಾಮಂಡಳವೂ ಶಿಕ್ಷಣ, ತರಬೇತಿ ಮತ್ತು ಪ್ರಚಾರದ ಮೂಲಕ ರಾಜ್ಯದ 47 ಸಾವಿರ ಸಹಕಾರ ಸಂಘಗಳಿಗೆ ಮಾತೃಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಆರ್.ಕೆ.ಡಿ.ಸಿ.ಸಿ. ಬ್ಯಾಂಕ್‌ ಉಪಾಧ್ಯಕ್ಷ ಶಿವಶಂಕರಗೌಡ ಪಾಟೀಲ, ಪ್ರಮುಖರಾದ ಹಾಲಯ್ಯ ವಿ. ಹುಡೇಜಾಲಿ, ಶಕುಂತಲಾ ಹುಡೇಜಾಲಿ, ತೋಟಪ್ಪ ಎಚ್. ಕಾಮನೂರು, ದಾದಾಪೀರ್ ಗೋನೆಗೊಂಡಲ, ಮಹಾಂತೇಶ ಸಜ್ಜನ್, ವೆಂಕಟೇಶ ಶೆಟ್ಟರ್, ರಾಜೀವ್ ಮಾದಿನೂರು, ಭೀಮರಡ್ಡಿ ಶ್ಯಾಡ್ಲಗೇರಿ, ಪ್ರಕಾಶ ಸಜ್ಜನ, ಅಕ್ಷಯ್ ಕುಮಾರ, ಗವಿಸಿದ್ದಯ್ಯ ಎಸ್. ಹಿರೇಮಠ, ಮಲ್ಲಿಕಾರ್ಜುನಯ್ಯ ಮತ್ತು ಹನಮೇಶ ಹಾಗೂ ಇತರರಿದ್ದರು. ನಿವೃತ್ತ ಅಪರ ನಿಬಂಧಕ ಐ.ಎಸ್. ಗಿರಡ್ಡಿ ಹಾಗೂ ಉಪನಿಬಂಧಕ ದಸ್ತಗೀರ ಅಲಿ ಚುನಾವಣಾ ಜರುಗಿಸುವ ಪ್ರಕ್ರಿಯೆಗಳ ಕುರಿತು ಉಪನ್ಯಾಸ ನೀಡಿದರು. ತರಬೇತಿ ಕಾರ್ಯಾಗಾರದಲ್ಲಿ ಒಟ್ಟು 117 ಶಿಬಿರಾರ್ಥಿಗಳು ಭಾಗವಹಿಸಿದ್ದರು.

Share this article