ಕೃಷಿ ಭೂಮಿ ಉಳಿಸಿ ಅಭಿಯಾನ ಮುಖಾಂತರ ರೈತರಿಗೆ ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣಿನ ಪರೀಕ್ಷೆ, ಮಣ್ಣಿನ ಆರೋಗ್ಯ ಕಾರ್ಡ್ ಗಳ ಬಳಕೆ ನೈಸರ್ಗಿಕ ಕೃಷಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಹುಣಸೂರು ತಾಲೂಕು ಕಸಬಾ ಹೋಬಳಿಯ ಜಡಗನಕೊಪ್ಪಲು ಗ್ರಾಮದಲ್ಲಿ ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಕುರಿತು ಗುರುವಾರ ಆಯೋಜಿಸಿದ್ದ ಒಂದು ದಿನದ ಹೊರಾಂಗಣ ತರಬೇತಿಗೆ ಕಾರ್ಯಕ್ರಮವನ್ನು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಕೆ.ನಾಗರಾಜ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ರೈತರು ರಸಗೊಬ್ಬರಗಳನ್ನು ಬೆಳೆಗಳಿಗೆ ವೈಜ್ಞಾನಿಕವಾಗಿ ಶಿಫಾರಿತ ಪ್ರಮಾಣದಲ್ಲಿ ನೀಡಬೇಕು ಹಾಗೂ ಅತಿಯಾದ ರಾಸಾಯನಿಕಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಕುಂಟಿತವಾಗುವುದನ್ನು ತಪ್ಪಿಸಲು ಹೆಚ್ಚು ಪ್ರಮಾಣದಲ್ಲಿ ಸಾವಯವ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ಬಳಸುವಂತೆ ತಿಳಿಸಿದರು.
ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಸಂಸ್ಥೆಯ (ಸಿ.ಟಿ.ಆರ್.ಐ.) ಮುಖ್ಯಸ್ಥ ಡಾ. ರಾಮಕೃಷ್ಣ ಮಾತನಾಡಿ, ಕೃಷಿ ಭೂಮಿ ಉಳಿಸಿ ಅಭಿಯಾನ ಮುಖಾಂತರ ರೈತರಿಗೆ ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣಿನ ಪರೀಕ್ಷೆ, ಮಣ್ಣಿನ ಆರೋಗ್ಯ ಕಾರ್ಡ್ ಗಳ ಬಳಕೆ ನೈಸರ್ಗಿಕ ಕೃಷಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಸಿ.ಟಿ.ಆರ್.ಐ. ನ ಹಿರಿಯ ವಿಜ್ಞಾನಿ ರಾಘವೇಂದ್ರ ಅವರು ಮಣ್ಣು ಮಾದರಿ ಸಂಗ್ರಹಣೆ ಹಾಗೂ ಮಣ್ಣು ಪರೀಕ್ಷೆ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಸಿ.ಟಿ.ಆರ್.ಐ. ನ ಹಿರಿಯ ವಿಜ್ಞಾನಿ ಗುರು ಅವರು ಕೃಷಿ ಬೆಳೆಗಳಲ್ಲಿ ಸಮಗ್ರ ರೋಗ ನಿರ್ವಹಣೆ ಬಗ್ಗೆ ತಿಳಿಸಿದರು. ಸಿ.ಟಿ.ಆರ್.ಐ. ನ ಹಿರಿಯ ವಿಜ್ಞಾನಿ ನಂದರವರು ಪ್ರಮಾಣಿತ ಬಿತ್ತನೆ ಬೀಜ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಅಧಿಕಾರಿಯಾದ ಗೌರವ್ವ ಅಗಸೀಬಾಗಿಲ ಅವರು ಬೀಜೋಪಚಾರದ ಪ್ರಾಮುಖ್ಯತೆ ಬಗ್ಗೆ ರೈತರಿಗೆ ತಿಳಿಸಿದರು. ತಂಬಾಕು ಮಂಡಲಿಯ ಸಂಜನ ಮತ್ತು ಕಸ್ತೂರಿ ಇದ್ದರು.
ಗೌರವ್ವ ಅಗಸೀಬಾಗಿಲ ನಿರೂಪಿಸಿ, ಸ್ವಾಗತಿಸಿದರು. 60ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.