ಆಧ್ಯಾತ್ಮಿಕ ಕಾರ್ಯದಿಂದ ಪರಿವರ್ತನೆ ಸಾಧ್ಯ: ಪ್ರಕಾಶ ಮಲ್ಪೆ

KannadaprabhaNewsNetwork | Published : Apr 2, 2025 1:03 AM

ಸಾರಾಂಶ

ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಯುಗಾದಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವ ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದ ಆವರಣದಿಂದ ವಿವಿಧ ಸ್ತಬ್ಧಚಿತ್ರಗಳು, ಮಹಿಳಾ ಭಜನಾ ತಂಡಗಳು, ಚಂಡೆ ವಾದ್ಯದೊಂದಿಗೆ ಬೃಹತ್ ಮೆರವಣಿಗೆ ನಡೆಯಿತು.

ಭಟ್ಕಳ: ಶಿರಾಲಿಯಲ್ಲಿ ಯುಗಾದಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಶಿರಾಲಿಯ ಜನತಾ ವಿದ್ಯಾಲಯ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅಂಕಣಕಾರ ಪ್ರಕಾಶ ಮಲ್ಪೆ, ಜೀವನದಲ್ಲಿ ನಾವು ಪರಿವರ್ತನೆ ಹೊಂದಬೇಕಾದರೆ ಸೂರ್ಯ ನಮಸ್ಕಾರ, ಭಗವದ್ಗೀತಾ ಪಠಣ, ಸಾಯಂಕಾಲ ಭಜನೆಯಂತಹ ಆಧ್ಯಾತ್ಮಿಕ ಕಾರ್ಯ ಮಾಡಬೇಕು. ಭಗವಂತನಲ್ಲಿ ಭಕ್ತಿಯಿಂದ ದುಶ್ಚಟ, ದುರ್ಗುಣಗಳನ್ನು ಬಿಟ್ಟು ಮನಃಪರಿವರ್ತನೆ ಮಾಡಿಕೊಳ್ಳಲು ಸಾಧ್ಯ. ತನ್ಮೂಲಕ ಜೀವನದಲ್ಲಿ ಉತ್ತಮ ಸಾಧನೆ ಸಾಧ್ಯ ಎಂದು ಹೇಳಿದರು.

ನಾವು ನಮ್ಮ ಮೂಲವನ್ನೇ ಮರೆಯುತ್ತಿದ್ದೇವೆ. ಇದು ಸರಿಯಾದ ಮಾರ್ಗವಲ್ಲ. ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಮೂಲ ಶಿಕ್ಷಣ ಪದ್ಧತಿಯೇ ಬದಲಾಗಿದ್ದು ಮತ್ತೆ ಪುನಃ ನಾವು ನಮ್ಮ ಮೂಲಕ್ಕೆ ಹೋಗಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಿರಾಲಿ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಭಾಸ್ಕರ ದೈಮನೆ ಮಾತನಾಡಿ, ಮೊದಲನೇ ವರ್ಷದ ಯುಗಾದಿ ಉತ್ಸವ ಸಾರ್ವಜನಿಕರ ಸಹಕಾರದಿಂದ ಅತಿ ವಿಜೃಂಭಣೆಯಿಂದ ಆಚರಿಸಿದ್ದೇವೆ. ಇದು ಮುಂದಿನ ವರ್ಷಗಳಿಗೆ ನಾಂದಿಯಾಗಲಿ ಎಂದೂ ಆಶಿಸಿದರು. ಯುಗಾದಿ ಉತ್ಸವ ಸಮಿತಿ ಗೌರವಾಧ್ಯಕ್ಷ ಆರ್.ಪಿ. ನಾಯ್ಕ, ದೇವಿದಾಸ ಮಹಾಲೆ ಮಂತಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಪೂರ್ವ ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದ ಆವರಣದಿಂದ ವಿವಿಧ ಸ್ತಬ್ಧಚಿತ್ರಗಳು, ಮಹಿಳಾ ಭಜನಾ ತಂಡಗಳು, ಚಂಡೆ ವಾದ್ಯ ಸೇರಿದಂತೆ ವಿವಿಧ ತಂಡಗಳೊಂದಿಗೆ ಬೃಹತ್ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಜನತಾ ವಿದ್ಯಾಲಯದ ಆವರಣ ತಲುಪಿತು. ಮಾಜಿ ಶಾಸಕ ಸುನೀಲ್ ಬಿ. ನಾಯ್ಕ, ಹಿಂದೂ ಮುಖಂಡರಾದ ಗೋವಿಂದ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ದೀಪಕ ನಾಯ್ಕ, ಶ್ರೀಕಾಂತ ನಾಯ್ಕ, ಮುಕುಂದ ನಾಯ್ಕ, ಪ್ರಮೋದ ಜೋಶಿ, ಶಿವರಾಮ್ ದೇವಾಡಿಗ, ಬಿಜೆಪಿ ತಾಲೂಕು ಅಧ್ಯಕ್ಷ ಲಕ್ಮಿನಾರಾಯಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಬಿಜೆಪಿ ಮುಖಂಡ ಸುಬ್ರಾಯ ದೇವಾಡಿಗ ಪಾಲ್ಗೊಂಡಿದ್ದರು.

Share this article