ಸಾರಿಗೆ ಬಸ್‌ಗಳಲ್ಲಿ ಮೀನು ಸಾಗಾಟ ನಿಷೇಧಕ್ಕೆ ವಿರೋಧ

KannadaprabhaNewsNetwork |  
Published : May 19, 2026, 02:30 AM IST
 | Kannada Prabha

ಸಾರಾಂಶ

ಸಾರಿಗೆ ಬಸ್‌ಗಳಲ್ಲಿ ಮೀನು ಸಾಗಾಟ ನಿಷೇಧಕ್ಕೆ ವಿರೋಧ

ಬದುಕಿನ ದಾರಿ ಮುಚ್ಚದಂತೆ ಜಿಲ್ಲಾಡಳಿತಕ್ಕೆ ಮೀನುಗಾರರ ಮೊರೆ

ಕನ್ನಡಪ್ರಭ ವಾರ್ತೆ ಕಾರವಾರ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಹಸಿ ಹಾಗೂ ಒಣ ಮೀನು ಸಾಗಾಟವನ್ನು ನಿಷೇಧಿಸಿರುವ ಸರ್ಕಾರದ ಇತ್ತೀಚಿನ ಆದೇಶವು ಕರಾವಳಿಯ ಮೀನುಗಾರರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಅವೈಜ್ಞಾನಿಕ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ ಮಾಜಾಳಿ, ದೇವಬಾಗ್, ಅಂಕೋಲಾ ಸೇರಿದಂತೆ ವಿವಿಧ ಭಾಗಗಳ ನೂರಾರು ನಾಡದೋಣಿ ಮೀನುಗಾರರು ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಧಾರವಾಡ ಮೂಲದ ಪ್ರಯಾಣಿಕರೊಬ್ಬರು ನೀಡಿದ ದೂರಿನ ಹಿನ್ನೆಲೆ ಸಾರಿಗೆ ಸಂಸ್ಥೆಯು ಬಸ್‌ಗಳಲ್ಲಿ ಮೀನು ಸಾಗಾಟ ಮಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದರೆ, ಕರಾವಳಿಯ ನೈಜ ಪರಿಸ್ಥಿತಿಯನ್ನು ಅರಿಯದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಾಳಿ, ದೇವಬಾಗ್, ಚಿತ್ತಾಕುಲ, ಸುಂಕೇರಿ ಮತ್ತು ನಂದನಗದ್ದಾ ಭಾಗದ ಸಾವಿರಾರು ಬಡ ಮೀನುಗಾರ ಕುಟುಂಬಗಳಿಗೆ ತಾವು ಹಿಡಿದ ಮೀನನ್ನು ಮಾರುಕಟ್ಟೆಗೆ ತಲುಪಿಸಲು ಸರ್ಕಾರಿ ಬಸ್‌ಗಳೇ ಏಕೈಕ ಆಧಾರವಾಗಿವೆ.ಬಸ್ ಸಂಚಾರ ಆರಂಭವಾದ ಕಾಲದಿಂದಲೂ ನಾವು ಮೀನುಗಳನ್ನು ಸಾಗಿಸುತ್ತಾ ಜೀವನೋಪಾಯ ನಡೆಸುತ್ತಿದ್ದೇವೆ. ನಾವು ಮೀನುಗಳನ್ನು ಅತ್ಯಂತ ವ್ಯವಸ್ಥಿತವಾಗಿ ಪ್ಯಾಕ್ ಮಾಡಿಕೊಂಡೇ ಬಸ್ಸಿಗೆ ಹತ್ತುತ್ತೇವೆ, ಇದರಿಂದ ಸಹಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗುತ್ತಿದೆ. ಕರಾವಳಿಯ ಜನಜೀವನ ಹಾಗೂ ನಮ್ಮ ಸಂಕಷ್ಟಗಳ ಅರಿವಿಲ್ಲದ ದೂರುಗಳ ಆಧಾರದ ಮೇಲೆ ಏಕಾಏಕಿ ನಿಷೇಧ ಹೇರಿರುವುದು ಸರಿಯಲ್ಲ ಎಂದು ಮೀನುಗಾರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.ಸಾರಿಗೆ ಸಂಸ್ಥೆಯ ನಿಯಮಗಳಿಗೆ ಬದ್ಧವಾಗಿಯೇ ನಾವು ಸಾಗಾಟ ಮಾಡುತ್ತಿದ್ದೇವೆ. ಆದ್ದರಿಂದ ಸರ್ಕಾರ ಕೂಡಲೇ ಈ ಆದೇಶವನ್ನು ಪುನರ್ ಪರಿಶೀಲಿಸಬೇಕು ಅಥವಾ ಕರಾವಳಿ ಭಾಗದ ಮೀನುಗಾರರಿಗೆ ವಿಶೇಷ ರಿಯಾಯಿತಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಒಂದು ವೇಳೆ ಜಿಲ್ಲಾಡಳಿತ ಹಾಗೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಜಿಲ್ಲಾದ್ಯಂತ ಇರುವ ಎಲ್ಲಾ ಮೀನುಗಾರರನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಈ ಸಂದರ್ಭ ಮೀನುಗಾರ ಮುಖಂಡರಾದ ಚಂದ್ರಹಾಸ, ತೋಕು, ಮಂಜುನಾಥ್, ಗಂಗೆ, ದೇವಾನಂದ, ಸುರೇಖಾ, ಜಗ್ಗು, ಮಂಗಲಾ ಹಾಗೂ ನೂರಾರು ಸಂಖ್ಯೆಯಲ್ಲಿ ಮೀನುಗಾರ ಮಹಿಳೆಯರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಕಡ್ಡಾಯ: ಮುಂದಿನ ವರ್ಷದಿಂದ ಹಂತ ಹಂತವಾಗಿ ಮಾಡಿ-ಭುವನೇಶ್ವರ ಶಿಡ್ಲಾಪುರ
ಬೇರೆ ತಾಲೂಕಿಗೆ ಗೊಬ್ಬರ ಸರಬರಾಜಾದರೆ ಕ್ರಮ-ಶಾಸಕ ಪಠಾಣ್‌