ಬ್ಯಾಡಗಿ: ಕಳೆದ 3 ದಿನಗಳಿಂದ ಪಟ್ಟಣದಲ್ಲಿ ಸುರಿದ ಮಳೆಯಿಂದಾಗಿ ಸೋಮವಾರ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿಗೆ ಕೊಂಚ ಹಿನ್ನಡೆ ಆಯಿತು. ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತ ಪರಿಣಾಮ ಸಂಚಾರವು ಸಹ ಸಾಧ್ಯವಾಗದೇ ಉಳಿಯಿತು. ಅವಶೇಷ ತೆರವು ಸಹ ಮಂದಗತಿಯಲ್ಲಿ ಸಾಗುತ್ತಿದೆ.
ಮಣ್ಣು ಸಾಗಾಟ ತಲೆನೋವು: ಮುಖ್ಯರಸ್ತೆ ಎರಡೂ ಬದಿಯಲ್ಲಿದ್ದ ಶೇ.95ರಷ್ಟು ಕಟ್ಟಡಗಳನ್ನು ತೆರವುಗೊಳಿಸಿದ್ದು ಕಟ್ಟಡಗಳಿಂದ ಹೊರಬರುತ್ತಿರುವ ಜಲ್ಲುಮಣ್ಣು ಸಾಗಿಸಲು ಹರಸಾಹಸ ಪಡಬೇಕಾಗಿದೆ, ಜೆಸಿಬಿ, ಹಿಟಾಚಿ ಸೇರಿದಂತೆ ಭಾರೀ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಬೃಹತ್ ಪ್ರಮಾಣದ ಮಣ್ಣಿನ ಗುಡ್ಡೆಗಳನ್ನು ತೆರವುಗೊಳಿಸಲಾಗುತ್ತಿದೆ. ಬಿಸಿಲಿನ ತಾಪದ ನಡುವೆ ಪುರಸಭೆ ಸಿಬ್ಬಂದಿ ಮತ್ತು ಕಾರ್ಮಿಕರು ನಿರಂತರವಾಗಿ ಶ್ರಮಿಸುತ್ತಿರುವ ದೃಶ್ಯಗಳು ಸೋಮವಾರ ಕಂಡು ಬಂದವು.ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ತೆರವು ಕಾರ್ಯಾಚರಣೆಗೆ ಇನ್ನಷ್ಟು ಚುರುಕು ನೀಡುತ್ತಿದ್ದಾರೆ. ಪ್ರತಿ ಭಾಗಕ್ಕೂ ಭೇಟಿ ನೀಡಿ ಕಾರ್ಮಿಕರಿಗೆ ಮಾರ್ಗದರ್ಶನ ನೀಡಿದ ಅವರು, ಅವಶೇಷ ತೆರವು ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸಂಚಾರ ವ್ಯವಸ್ಥೆಯ ಮೇಲೂ ವಿಶೇಷ ಗಮನ ಹರಿಸಿದರು.ಹಲವು ವರ್ಷಗಳಿಂದ ಕಿರಿದಾಗಿದ್ದ ಮುಖ್ಯರಸ್ತೆ ಇದೀಗ ಅಗಲೀಕರಣದಿಂದಾಗಿ ಬೃಹದಾಕಾರವಾಗಿ ಕಾಣುತ್ತಿದ್ದು, ಬರುವ ದಿನಗಳಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮವಾಗಲಿದೆ. ಹೀಗಾಗಿ ನಮ್ಮೂರಿನ ರಸ್ತೆ ಹೇಗಾಗಲಿದೆ ಎಂಬುದರ ಕುರಿತು ಸಾರ್ವಜನಿಕರು ಕುತೂಹಲದಿಂದ ನೋಡುತ್ತಿರುವ ದೃಶ್ಯಗಳು ಕಂಡು ಬಂದವು.ಹೆಚ್ಚಿನ ಜೆಸಿಬಿ, ಹಿಟಾಚಿ ಹಾಗೂ ಟಿಪ್ಪರಗಳನ್ನ ಬಳಸಿಕೊಂಡು ಬೇಗನೆ ತೆರವು ಮಾಡುವ ಕಾರ‍್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಮಳೆ ಹೆಚ್ಚಾದಲ್ಲಿ ಕಾಮಗಾರಿ ವೇಗಕ್ಕೆ ಕಡಿವಾಣ ಬೀಳಲಿದೆ. ಇಲ್ಲಿಯವರೆಗೂ ಕಟ್ಟಡ ತೆರವುಗೊಳಿಸಿಕೊಳ್ಳದೆ ಇರುವವರು ಕೂಡಲೇ ತೆರವು ಮಾಡಿಕೊಂಡು ಸಹಕರಿಸಿ, ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಿದಲ್ಲಿ ಎಲ್ಲರಿಗೂ ಒಳ್ಳೆಯದು ಎಂದು ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಹೇಳಿದರು.