ನರೇಗಲ್ಲ/ಗದಗ: ಕಲಬುರಗಿ ಜಿಲ್ಲೆಯ ಅಫಜಲಪುರದಿಂದ ಶಿರಹಟ್ಟಿಯ ಫಕೀರೇಶ್ವರ ಮಠಕ್ಕೆ ಬರುತ್ತಿದ್ದ ಭಕ್ತರಿದ್ದ ಟಾಟಾ ಸುಮೋ ಹಾಗೂ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ ಆರು ಜನರು ಮೃತರಾಗಿ, ಮೂವರು ತೀವ್ರ ಗಾಯಗೊಂಡ ದಾರುಣ ಘಟನೆ ನರೇಗಲ್ ಬಳಿ ಸೋಮವಾರ ಮುಂಜಾನೆ ಸಂಭವಿಸಿದೆ.
ಮೃತರೆಲ್ಲ ಅಫಜಲಪುರ ತಾಲೂಕಿನ ಮಾದನ ಹಿಪ್ಪರಗಿ ಮೂಲದ ಕತ್ತಿ ಹಾಗೂ ಕಲಶೆಟ್ಟಿ ಎಂಬ ಎರಡು ಕುಟುಂಬಗಳಿಗೆ ಸೇರಿದವರೆಂದು ತಿಳಿದು ಬಂದಿದೆ.ಇವರು ಮಾದನ ಹಿಪ್ಪರಗಿಯಿಂದ ಹೊರಟು ಶಿರಹಟ್ಟಿಯ ಫಕಿರೇಶ್ವರ ಮಠಕ್ಕೆ ಆಗಮಿಸುತ್ತಿದ್ದರು. ನರೇಗಲ್‌ದಿಂದ ಕೇವಲ 6 ಕಿ.ಮೀ. ದೂರದಲ್ಲಿ ನರೇಗಲ್- ಗಜೇಂದ್ರಗಡ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸ್ಸು ಗದಗದಿಂದ ಗಜೇಂದ್ರಗಡದತ್ತ ತೆರಳುತ್ತಿತ್ತು ಎನ್ನಲಾಗಿದೆ. ಐವರು ಸ್ಥಳದಲ್ಲೇ ಮೃತರಾಗಿದ್ದರೆ, ಬಾಲಕನೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.ಸಚಿನ ಕತ್ತಿ (31), ಶಿವಕುಮಾರ ಕಲಶಟ್ಟಿ (51), ಚಂದ್ರಕಲಾ ಕಲಶಟ್ಟಿ(42), ರಾಣಿ ಕಲಶಟ್ಟಿ (32), ದ್ರಾಕ್ಷಾಯಿಣಿ ಕತ್ತಿ (33) ಸ್ಥಳದಲ್ಲೇ ಮೃತರಾಗಿದ್ದರೆ, ಬಾಲಕ ದಿಂಗಾಲೇಶ್ವರ ಕಲಶಟ್ಟಿ (5) ಎಂಬ ಬಾಲಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಮೃತನಾಗಿದ್ದಾನೆ. ಇನ್ನೂ ಮೂವರು ಗಾಯಗೊಂಡಿದ್ದು, ಅಲ್ಲಮಪ್ರಭು ಕಲಶಟ್ಟಿ, ಮಹೇಶ ಕತ್ತಿ, ಅನಿತಾ ಕತ್ತಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನರೇಗಲ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ಕೂಡಾ ದಾಖಲಾಗಿದೆ. ಅತೀ ವೇಗ ಅಪಘಾತಕ್ಕೆ ಕಾರಣ ಎನ್ನುವ ಚರ್ಚೆಗಳು ಘಟನಾ ಸ್ಥಳದಲ್ಲಿ ಕೇಳಿ ಬರುತ್ತಿದ್ದವು.
ದಿಂಗಾಲೇಶ್ವರ ಶ್ರೀಗಳು ಭೇಟಿ:ದೂರದ ಅಫ್ಜಲಪುರ ತಾಲೂಕಿನಿಂದ ಗದಗ ಜಿಲ್ಲೆಯ ಶಿರಹಟ್ಟಿ ಮಠಕ್ಕೆ ಆಗಮಿಸುತ್ತಿದ್ದ ಭಕ್ತರೇ ಅಪಘಾತಕ್ಕೆ ತುತ್ತಾಗಿ, ಸಾವನ್ನಪ್ಪಿದ್ದು, ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಗದಗ ನಗರದ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ದಿಂಗಾಲೇಶ್ವರ ಶ್ರೀಗಳು, ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು.