ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿ. 31ಕ್ಕೆ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ: ಜಟಾಪಟಿ

KannadaprabhaNewsNetwork | Updated : Dec 24 2024, 10:53 AM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಡಿ. 31 ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಆದರೆ, ಅದಕ್ಕೂ ಮುನ್ನವೇ ನೌಕರ ಸಂಘಟನೆಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು, ಮುಷ್ಕರ ಯಶಸ್ಸಿನ ಬಗ್ಗೆ ನೌಕರರೇ ಅನುಮಾನ ವ್ಯಕ್ತಪಡಿಸುವಂತಾಗಿದೆ.

 ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಡಿ. 31 ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಆದರೆ, ಅದಕ್ಕೂ ಮುನ್ನವೇ ನೌಕರ ಸಂಘಟನೆಗಳು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದು, ಮುಷ್ಕರ ಯಶಸ್ಸಿನ ಬಗ್ಗೆ ನೌಕರರೇ ಅನುಮಾನ ವ್ಯಕ್ತಪಡಿಸುವಂತಾಗಿದೆ.

ವೇತನ ಹೆಚ್ಚಳ, ವೇತನ ಹೆಚ್ಚಳ ಹಿಂಬಾಕಿ ಸೇರಿ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರಿಗೆ ನೌಕರರು ಡಿ.31ರಿಂದ ಕರ್ತವ್ಯ ಬಹಿಷ್ಕರಿಸಿ ಹೋರಾಟ ನಡೆಸುವುದಾಗಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ. ಆದರೆ, ಈ ಮುಷ್ಕರಕ್ಕೆ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು, ತಾವು ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದೆ. ಅಲ್ಲದೆ, ಮುಷ್ಕರಕ್ಕೆ ಕರೆ ನೀಡುವುದಕ್ಕೂ ಮುನ್ನ ಒಕ್ಕೂಟದ ಅಭಿಪ್ರಾಯ ಪಡೆದಿಲ್ಲ ಹೀಗಾಗಿ ಜಂಟಿ ಕ್ರಿಯಾ ಸಮಿತಿಯ ಮುಷ್ಕರಕ್ಕೆ ಬೆಂಬಲಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಇದು ಈಗ ಎರಡೂ ಸಂಘಟನೆಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಆಮೂಲಕ ಮುಷ್ಕರದ ಮೂಲ ಉದ್ದೇಶಕ್ಕೆ ಹೊಡೆತ ಬೀಳುವ ಸಾಧ್ಯತೆಗಳಿವೆ.

ನಿಮ್ಮನ್ನು ಕೇಳುವ ಅವಶ್ಯಕತೆಯಿಲ್ಲ: ಮುಷ್ಕರಕ್ಕೆ ಕರೆ ನೀಡುವುದಕ್ಕೂ ಮುನ್ನ ಒಕ್ಕೂಟದ ಹಾಗೂ ನೌಕರರ ಅಭಿಪ್ರಾಯ ಪಡೆದಿಲ್ಲ ಎಂದು ಹೇಳಲಾಗಿದೆ. ಅದಕ್ಕೆ ಒಕ್ಕೂಟವು ಜಂಟಿ ಕ್ರಿಯಾ ಸಮಿತಿಯ ಭಾಗವಲ್ಲ. ಹೀಗಾಗಿ ಮುಷ್ಕರಕ್ಕೂ ಮುನ್ನ ನಿಮ್ಮನ್ನು ಕೇಳುವ ಅವಶ್ಯಕತೆಯಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯು ಒಕ್ಕೂಟಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ನೌಕರರ ಹಿತಾಸಕ್ತಿ ಕಾಪಾಡಿಲ್ಲ: 2020 ಮತ್ತು 2021ರಲ್ಲಿ ಒಕ್ಕೂಟದ ನೇತೃತ್ವದಲ್ಲಿ ನಡೆದ ಮುಷ್ಕರದ ಬಗ್ಗೆಯೂ ಪ್ರತಿಕ್ರಿಯಿಸಿರುವ ಜಂಟಿ ಕ್ರಿಯಾ ಸಮಿತಿ, ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬುದು ಸೇರಿ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎರಡು ಬಾರಿ ಮುಷ್ಕರ ನಡೆಸಿದಿರಿ. ಆದರೆ, ಶೇ. 15ರಷ್ಟು ವೇತನ ಹೆಚ್ಚಳಕ್ಕಷ್ಟೇ ಸೀಮಿತಗೊಂಡು ಮುಷ್ಕರ ವಾಪಾಸು ಪಡೆದಿರಿ. ಈ ಮುಷ್ಕರದಲ್ಲಿ ಸಾವಿರಾರು ನೌಕರರ ಬದುಕು ಹಾಳಾಗುವಂತೆ ಮಾಡಿದಿರಿ. ಅಲ್ಲದೆ, ಟ್ರೇಡ್‌ ಯೂನಿಯನ್‌ ಚಳವಳಿಯನ್ನೇ ಹಾದಿ ತಪ್ಪಿಸಿದಿರಿ ಎಂದು ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ.

ಮುಷ್ಕರ ವಿಫಲವಾದರೆ ಕ್ಷಮಿಸುವುದಿಲ್ಲ: ನೌಕರರ ವೇತನ ಹೆಚ್ಚಳ ಮತ್ತು 38 ತಿಂಗಳ ವೇತನ ಹೆಚ್ಚಳ ಬಾಕಿ ಪಡೆಯುವ ಉದ್ದೇಶದೊಂದಿಗೆ ಮಾಡಲಾಗುತ್ತಿರುವ ಮುಷ್ಕರ ವಿಫಲವಾದರೆ ಅದಕ್ಕೆ ಒಕ್ಕೂಟವೇ ಕಾರಣವಾಗಲಿದೆ. ಹಾಗೇನಾದರೂ ಆದರೆ ನೌಕರರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಒಕ್ಕೂಟದ ಮುಖಂಡರಿಗೆ ಎಚ್ಚರಿಸಿದೆ. ಅಲ್ಲದೆ, ಮುಷ್ಕರಕ್ಕೆ ಬೆಂಬಲ ನೀಡದಿದ್ದರೆ ನೌಕರರಿಗೆ ದ್ರೋಹ ಬಗೆದಂತಾಗಲಿದೆ ಎಂದೂ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

ನೌಕರರ ಹಿತರಕ್ಷಣೆಗಾಗಿ ಮುಷ್ಕರ: ಮುಷ್ಕರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಜಂಟಿ ಕ್ರಿಯಾ ಸಮಿತಿ ಮುಖಂಡರು, ಡಿ. 31ರಿಂದ ಸಾರಿಗೆ ನೌಕರರ ಮುಷ್ಕರ ನಡೆಯಲಿದೆ. ಈ ಹಿಂದೆ ಡಿ.9ರಂದು ಬೆಳಗಾವಿ ಅಧಿವೇಶನದ ವೇಳೆ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮುಷ್ಕರದ ನೋಟಿಸ್‌ ನೀಡಿದ್ದೇವೆ. ಆದರೂ, ಸರ್ಕಾರ ಬೇಡಿಕೆ ಈಡೇರಿಸಲು ಮುಂದಾಗಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ಡಿ.31ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತೇವೆ. ಮುಷ್ಕರ ಹಿನ್ನೆಲೆಯಲ್ಲಿ ನಾಲ್ಕೂ ನಿಗಮಗಳ 23 ಸಾವಿರ ಬಸ್‌ಗಳು ಡಿಪೋದಲ್ಲಿಯೇ ನಿಲ್ಲಲಿವೆ ಎಂದು ತಿಳಿಸಿದ್ದಾರೆ.

Share this article