ಸಾರಿಗೆ ನೌಕರರ ಮುಷ್ಕರ: ಖಾಸಗಿ ಬಸ್‌ಗಳ ಆರ್ಭಟ

KannadaprabhaNewsNetwork |  
Published : Aug 05, 2025, 11:45 PM IST
1.ರಾಮನಗರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳು ನಿಂತಿರುವುದು. | Kannada Prabha

ಸಾರಾಂಶ

ರಾಮನಗರ: ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ಪ್ರಾರಂಭಿಸಿದ್ದರಿಂದ ಮಂಗಳವಾರ ಸಾರಿಗೆ ಬಸ್ ಗಳು ರಸ್ತೆಗಿಳಿಯಲಿಲ್ಲ. ಆದರೆ, ಖಾಸಗಿ ಬಸ್‌ಗಳು ಪ್ರಯಾಣಿಕರ ಪರದಾಟ ತಪ್ಪಿಸಿತು.

ರಾಮನಗರ: ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ಪ್ರಾರಂಭಿಸಿದ್ದರಿಂದ ಮಂಗಳವಾರ ಸಾರಿಗೆ ಬಸ್ ಗಳು ರಸ್ತೆಗಿಳಿಯಲಿಲ್ಲ. ಆದರೆ, ಖಾಸಗಿ ಬಸ್‌ಗಳು ಪ್ರಯಾಣಿಕರ ಪರದಾಟ ತಪ್ಪಿಸಿತು.

ಬೆಂಗಳೂರು ದಕ್ಷಿಣ ಘಟಕ ವ್ಯಾಪ್ತಿಯಲ್ಲಿ ಆನೇಕಲ್‌ ಡಿಪೋದಲ್ಲಿ ಮಾತ್ರವೇ ಶೇಕಡ 100ರಷ್ಟು ಸಾರಿಗೆ ಬಸ್‌ಗಳು ರಸ್ತೆಗಿಳಿದಿವೆ. ಉಳಿದಂತೆ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಸೇರಿ 5 ಡಿಪೋಗಳಿಂದ ಒಂದೇ ಒಂದು ಸಾರಿಗೆ ಬಸ್ ಕೂಡ ಸಂಚಾರ ಮಾಡಿಲ್ಲ.

ಖಾಸಗಿ ಬಸ್‌ಗಳು ಲಗ್ಗೆ :

ಆದರೆ, ಖಾಸಗಿ ಬಸ್‌ಗಳು, ಮಿನಿ ಬಸ್ ಗಳು ಬೆಂಗಳೂರು - ಮೈಸೂರು ಮಾರ್ಗದಲ್ಲಿ ಸಂಚರಿಸಿದವು. ಸಾರಿಗೆ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್ ಗಳ ಆರ್ಭಟ ಜೋರಾಗಿತ್ತು. ಪ್ರಯಾಣಿಕರು ಸಾರಿಗೆ ಬಸ್ ಗಳಿಗೆ ಕಾಯದೆ ಖಾಸಗಿ ಬಸ್ ಗಳಲ್ಲಿಯೇ ಪ್ರಯಾಣಿಸಿದರು. ಪ್ರಯಾಣಿಕರ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖವಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು ಖಾಸಗಿ ಬಸ್ ನಿಲ್ದಾಣಗಳಾಗಿ ಪರಿವರ್ತನೆಗೊಂಡಿದ್ದವು. ಜತೆಗೆ ಖಾಸಗಿ ಶಾಲೆಯ ಬಸ್‌ಗಳಿಗೂ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಅಕ್ಕಪಕ್ಕದ ಹಳ್ಳಿಗಳವರೆಗೂ ಮಕ್ಕಳನ್ನು ಕರೆತರಲು ಸಂಚಾರ ಮಾಡಿದವು.

ಜಿಲ್ಲೆಯಿಂದ ಪ್ರತಿನಿತ್ಯ 20ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ, ಶಿಕ್ಷಣ, ವ್ಯಾಪಾರ ವಹಿವಾಟಿಗಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಹೀಗಾಗಿ ಆ ಎಲ್ಲ ಪ್ರಯಾಣಿಕರು ಬೆಂಗಳೂರಿಗೆ ತೆರಳಲು ಬಸ್ ನಿಲ್ದಾಣಗಳಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದ ದೃಶ್ಯ ಕಂಡು ಬಂದಿತು. ಖಾಸಗಿ ಬಸ್‌ಗಳ ಸಂಚಾರ ಪ್ರಯಾಣಿಕರ ಪರದಾಟ ತಪ್ಪಿಸಿತು.

ಕೆಲ ಪ್ರಯಾಣಿಕರು ರೈಲುಗಳ ಮೂಲಕ ಬೆಂಗಳೂರು ತಲುಪಿದರೆ, ಬಹುತೇಕರು ಖಾಸಗಿ ಬಸ್‌ಗಳ ಮೊರೆ ಹೋಗಿದ್ದರು. ಕೆಲವರು ಖಾಸಗಿ ವಾಹನಗಳನ್ನೇ ಆಶ್ರಯಿಸಿದ್ದರು. ನಗರ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಖಾಸಗಿ ಬಸ್‌ಗಳ ಮೂಲಕ ಓಡಾಡಿದರೆ, ಗ್ರಾಮೀಣ ಭಾಗದಲ್ಲಿ ಖಾಸಗಿ ಬಸ್‌ಗಳು ಸಹ ಕಾಣಲಿಲ್ಲ.

ಗ್ರಾಮೀಣ ವಿದ್ಯಾರ್ಥಿಗಳಂತು ಬಸ್‌ಗಳಿಲ್ಲದೇ ಪರದಾಡಿದರು. ಬಹುತೇಕ ಶಾಲಾ-ಕಾಲೇಜುಗಳು ಸಹ ವಿದ್ಯಾರ್ಥಿಗಳ ಕೊರತೆ ಎದುರಿಸಿದವು. ಸರ್ಕಾರಿ ಕಚೇರಿಗಳು ಸಹ ಶೇ.50ರಷ್ಟು ಬಿಕೋ ಎನ್ನುತ್ತಿದ್ದವು.

ಶಕ್ತಿ ಯೋಜನೆ ಅಡಿಯಲ್ಲಿ ಇಷ್ಟು ದಿನ ಮಹಿಳೆಯರು ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದರು. ಸಾರಿಗೆ ನೌಕರರ ಮುಷ್ಕರದ ಕಾರಣ ಖಾಸಗಿ ಬಸ್‌ಗಳಲ್ಲಿ ಮಹಿಳೆಯರು ಹಣ ನೀಡಿ ಪ್ರಯಾಣಿಸಿದರು.

ನಿತ್ಯ ಉಚಿತವಾಗಿ ಪ್ರಯಾಣಿಸುತ್ತಿದ್ದ ಮಹಿಳೆಯರು, ಹಣ ಕೊಟ್ಟು ಟಿಕೆಟ್ ಪಡೆಯಲು ಮುಖ ಮುರಿಯುತ್ತಿದ್ದರು.

ರೈಲುಗಳು ಫುಲ್ ರಶ್ :

ಬೆಂಗಳೂರು-ಮೈಸೂರು ಸಂಚರಿಸುವ ರೈಲುಗಳು ಮಂಗಳವಾರ ಫುಲ್ ರಶ್ ಆಗಿದ್ದವು. ಬೆಳಗ್ಗೆ ಹಾಗೂ ಸಂಜೆ ವೇಳೆ ರೈಲ್ವೆ ನಿಲ್ದಾಣದಲ್ಲಿ ಕಾಲಿಡಲು ಸಾಧ್ಯವಾಗದಷ್ಟು ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಮಾಮೂಲಿ ದಿನಗಳಲ್ಲಿ ಮಧ್ಯಾಹ್ನದ ರೈಲುಗಳು ಬಹುತೇಕ ಖಾಲಿ ಇರುತ್ತಿದ್ದವು. ಆದರೆ, ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲದಿದ್ದ ಕಾರಣ ಮಧ್ಯಾಹ್ನವೂ ಸಹ ರೈಲುಗಳು ಪ್ರಯಾಣಿಕರಿಂದ ತುಂಬಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್ :

ಮುಷ್ಕರದಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಪೋದಲ್ಲಿಯೇ ಉಳಿದಿದ್ದವು. ವಿಭಾಗೀಯ ನಿಯಂತ್ರಣಕಾರಿಗಳು ಎಷ್ಟೇ ಮನವಿ ಮಾಡಿದರೂ ಚಾಲಕರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಮುನ್ನೆಚರಿಕಾ ದೃಷ್ಟಿಯಿಂದಾಗಿ ಡಿಪೋ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಪೊಲೀಸರು ಇಲಾಖೆಯಿಂದ ಸರ್ಪಗಾವಲು ಹಾಕಲಾಗಿತ್ತು.

ರಾಮನಗರದ ಐಜೂರು ವೃತ್ತ, ಚನ್ನಪಟ್ಟಣದ ಸಾತನೂರು ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ ತುಕಡಿಗಳನ್ನು ಬಂದೋಬಸ್ತಿಗೆ ನಿಯೋಜಿಸಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಬಾಕ್ಸ್ ................

20 ಲಕ್ಷ ರು. ವಹಿವಾಟು:

ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರದಿಂದಾಗಿ ಬಸ್‌ಗಳು ರಸ್ತೆಗಿಳಿಯದ ಕಾರಣ ಒಂದು ದಿನಕ್ಕೆ ಅಂದಾಜು 55ರಿಂದ 60 ಲಕ್ಷ ರುಪಾಯಿಗಳಷ್ಟು ನಷ್ಟ ಉಂಟಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ವಿಭಾಗದಲ್ಲಿ ದಿನಕ್ಕೆ 80ಲಕ್ಷ ರು., ವಹಿವಾಟು ನಡೆಸುತ್ತಿದ್ದ ಕೆಎಸ್‌ಆರ್‌ಟಿಸಿ ಮಂಗಳವಾರ ಕೇವಲ 20 ಲಕ್ಷವಷ್ಟೆ ವಹಿವಾಟು ನಡೆಸಿದೆ. ಆನೇಕಲ್‌ ಡಿಪೋದಲ್ಲಿ ಮಾತ್ರವೇ ಶೇ.100ರಷ್ಟು ಬಸ್‌ಗಳು ರಸ್ತೆಗಿಳಿದಿವೆ. ಹೀಗಾಗಿ 20 ಲಕ್ಷ ವಹಿವಾಟು ಕಂಡಿದೆ. ಇನ್ನುಳಿದ 5 ಡಿಪೋಗಳಿಂದ ಐದಾರು ಬಸ್‌ಗಳು ಮಾತ್ರ ಕೆಲಕಾಲ ರಸ್ತೆಗಿಳಿದಿದ್ದು, ಬಳಿಕ ಅವುಗಳು ಸಹ ಸಂಚಾರ ಸ್ಥಗಿತಗೊಳಿಸಿತು.

ಬೆಂಗಳೂರು ದಕ್ಷಿಣ ಘಟಕದ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ. ಮಾಗಡಿ, ಕನಕಪುರ, ಆನೇಕಲ್ ಸೇರಿದಂತೆ ಒಟ್ಟು 6 ಡಿಪೊಗಳಿವೆ. ಇಲ್ಲಿಂದ ಪ್ರತಿನಿತ್ಯ 485 ಬಸ್ಸುಗಳು 454 ರೂಟ್‌ಗಳಲ್ಲಿ ಸಂಚರಿಸುತ್ತವೆ. ದಿನವೊಂದಕ್ಕೆ ಸರಾಸರಿ 2.10 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಈ ವಿಭಾಗದಿಂದ ಒಟ್ಟು 88 ಶೆಡ್ಯುಲ್‌ಗಳಲ್ಲಿ ಹೊರ ರಾಜ್ಯಗಳಿಗೆ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಸಾರಿಗೆ ನೌಕರರ ಮುಷ್ಕರದಿಂದಾಗಿ ಆನೇಕಲ್ ಹೊರತು ಪಡಿಸಿದರೆ, ಇನ್ನುಳಿದ ಪ್ರತಿ ತಾಲೂಕಿನಲ್ಲಿ ಎರಡ್ಮೂರು ಬಸ್‌ಗಳು ಸಂಚರಿಸಿರುವುದೇ ಹೆಚ್ಚು.

ಬಾಕ್ಸ್ ...............

ಬಿಎಂಟಿಸಿ ಸಂಚಾರ:

ಹಾರೋಹಳ್ಳಿ ಮತ್ತು ಬಿಡದಿಯಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ ಸಹಜ ಸ್ಥಿತಿಯಲ್ಲಿತ್ತು. ಆದರೆ, ಈ ಬಸ್‌ಗಳ ಸಂಚಾರವು ಯಾವ ಕ್ಷಣದಲ್ಲಿ ಬೇಕಿದ್ದರೂ ಸ್ಥಗಿತಗೊಳ್ಳುವ ಆತಂಕದಲ್ಲಿ ಚಾಲಕರು ಕರ್ತವ್ಯ ನಿರ್ವಹಿಸಿದರು. ಮಾಗಡಿಯಲ್ಲಿಯು ಕೆಲ ಬಿಎಂಟಿಸಿ ಬಸ್‌ಗಳು ಕಾಣಿಸಿಕೊಂಡಿದ್ದವು. ಜತೆಗೆ ಆಟೋಗಳಿಗೂ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದ್ದು, ಕೆಲವರು ಪ್ರಯಾಣ ದರವನ್ನು ಏರಿಕೆ ಮಾಡಿದ್ದರು.

ಕೋಟ್............

ಆನೇಕಲ್‌ನಲ್ಲಿ ಮಾತ್ರವೇ ಶೇ.100ರಷ್ಟು ಬಸ್‌ಗಳು ಸಂಚರಿಸಿವೆ. ಇನ್ನುಳಿದ ಕಡೆ 2 ಇಲ್ಲವೇ 3 ಬಸ್‌ಗಳಷ್ಟೆ ರಸ್ತೆಗಿಳಿದಿದ್ದವು. ಎಷ್ಟೆ ಪ್ರಯತ್ನಿಸಿದರೂ ಚಾಲಕರು ಕರ್ತವ್ಯಕ್ಕೆ ಬರುತ್ತಿಲ್ಲ. ಡಿಪೋಗಳಲ್ಲಿಯೇ ಬಸ್‌ಗಳು ನಿಂತಿವೆ.

-ಶ್ರೀ ಹರಿಬಾಬು, ವಿಭಾಗೀಯ ನಿಯಂತ್ರಕರು, ಕೆಎಸ್‌ಆರ್‌ಟಿಸಿ, ಬೆಂಗಳೂರು ದಕ್ಷಿಣ ಜಿಲ್ಲೆ

ಕೋಟ್ ................

ಸಹೊದ್ಯೋಗಿಗಳು ಮುಷ್ಕರದಲ್ಲಿ ತೊಡಗಿರುವಾಗ ನಾವು ಕರ್ತವ್ಯ ಮಾಡುತ್ತಿದ್ದೇವೆ. ಇದು ನಮಗೆ ಸರಿ ಅಲ್ಲ ಅನಿಸಿದರೂ ಅನಿವಾರ್ಯ. ನಾವು ಹಿರಿಯ ಅಧಿಕಾರಿಗಳ ಮಾತನ್ನು ಮೀರುವ ಹಾಗಿಲ್ಲ. ಹೊಟ್ಟೆಪಾಡಿಗಾಗಿ ಕೆಲಸ ಮಾಡಬೇಕಿದೆ.

- ಚಾಲಕ, ಕೆಎಸ್‌ಆರ್‌ಟಿಸಿ ಬಸ್

ಕೋಟ್ ...

ಸಾರಿಗೆ ಬಸ್ ಗಳ ಸಂಚಾರ ಇಲ್ಲದಿರುವುದು ತುಂಬಾ ಕಷ್ಟವಾಗಿದೆ. ಖಾಸಗಿ ಬಸ್ ಗಳಲ್ಲಿ ಕೇಳಿದಷ್ಟು ಹಣ ಕೊಟ್ಟು ಟಿಕೆಟ್ ಪಡೆಯಬೇಕು. ಗ್ರಾಮಾಂತರ ಪ್ರದೇಶಗಳಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲ.

-ರಮೇಶ್ ಕುಮಾರ್‌, ಪ್ರಯಾಣಿಕರು

5ಕೆಆರ್ ಎಂಎನ್ 1,2,3.ಜೆಪಿಜಿ

1.ರಾಮನಗರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳು ನಿಂತಿರುವುದು.

2.ರಾಮನಗರ ಡಿಪೋನಲ್ಲಿ ಪೊಲೀಸರು ಬಂದೋಬಸ್ತ್ ನಲ್ಲಿ ತೊಡಗಿರುವುದು.

3.ಬೆಂಗಳೂರಿನಿಂದ ಮೈಸೂರಿಗೆ ಸಂಚರಿಸುತ್ತಿರುವ ಸಾರಿಗೆ ಬಸ್ .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!