ಮರದ ದಿಮ್ಮಿಗಳ ಸಾಗಾಟ: ವಾಹನ ಸಂಚಾರಕ್ಕೆ ತೀವ್ರ ಅಡಚಣೆ

KannadaprabhaNewsNetwork |  
Published : Aug 23, 2026, 02:45 AM IST
ವಾಹನ ಸಂಚಾರಕ್ಕೆ ತೀವ್ರ ಅಡಚಣೆ | Kannada Prabha

ಸಾರಾಂಶ

ಸೋಮವಾರಪೇಟೆ-ಮಾದಾಪುರ-ಮಡಿಕೇರಿ ರಾಜ್ಯ ಹೆದ್ದಾರಿಯ ಮಾದಾಪುರ ಸಮೀಪದ ಇಗೋಡ್ಲು ಜಂಕ್ಷನ್‌ನಲ್ಲಿ ಹಾಡಹಗಲೇ ರಸ್ತೆ ಬದಿಯಲ್ಲಿ ಮರದ ದಿಮ್ಮಿಗಳನ್ನು ಲಾರಿಗಳಿಗೆ ತುಂಬಿಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ-ಮಾದಾಪುರ-ಮಡಿಕೇರಿ ರಾಜ್ಯ ಹೆದ್ದಾರಿಯ ಮಾದಾಪುರ ಸಮೀಪದ ಇಗೋಡ್ಲು ಜಂಕ್ಷನ್‌ನಲ್ಲಿ ಹಾಡಹಗಲೇ ರಸ್ತೆ ಬದಿಯಲ್ಲಿ ಮರದ ದಿಮ್ಮಿಗಳನ್ನು ಲಾರಿಗಳಿಗೆ ತುಂಬಿಸುತ್ತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಳೆಗಾಲದ ಸಂದರ್ಭ ಸಿಲ್ವರ್ ಮರಗಳನ್ನು ಕಡಿದು ರಸ್ತೆ ಬದಿಯಲ್ಲೇ ರಾಶಿ ಹಾಕಿ ಬಳಿಕ ದೊಡ್ಡ ಗಾತ್ರದ ಲಾರಿಗಳಿಗೆ ತುಂಬಿಸಲಾಗುತ್ತಿದೆ. ಲಾರಿಗಳನ್ನು ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿ ಮರಗಳನ್ನು ತುಂಬಿಸುವುದರಿಂದ ವಾಹನಗಳು ಸಂಚರಿಸಲು ಸ್ಥಳಾವಕಾಶ ಕಡಿಮೆಯಾಗುತ್ತಿದೆ.

ಶನಿವಾರವೂ ಇಗೋಡ್ಲು ಜಂಕ್ಷನ್‌ನಲ್ಲಿ ಇದೇ ರೀತಿಯಲ್ಲಿ ಮರಗಳನ್ನು ಲಾರಿಗೆ ತುಂಬಿಸಲಾಗಿದ್ದು, ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಡಿಕೇರಿ, ಹಟ್ಟಿಹೊಳೆ, ಮಾದಾಪುರ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯಲ್ಲಿ ಹಲವು ಕಡೆ ದೊಡ್ಡ ಲಾರಿಗಳು ರಸ್ತೆ ಬದಿಯಲ್ಲಿ ನಿಲ್ಲುವುದರಿಂದ ರಸ್ತೆ ಅಂಚುಗಳು ಹಾಳಾಗಿ ಹೊಂಡಗಳು ನಿರ್ಮಾಣವಾಗಿವೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈ ಹೊಂಡಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಾತ್ರಿ ವೇಳೆ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರ ವಾಹನಗಳು ಎದುರು ಬರುವ ವಾಹನಗಳಿಗೆ ದಾರಿ ಮಾಡಿಕೊಡುವ ಸಂದರ್ಭದಲ್ಲಿ ರಸ್ತೆ ಅಂಚಿಗೆ ಸರಿದರೆ ಹೊಂಡಗಳಿಗೆ ಸಿಲುಕಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯ ಬದಿಯಲ್ಲಿ ಮರಗಳನ್ನು ಸಂಗ್ರಹಿಸುವುದು ಹಾಗೂ ಲಾರಿಗಳಿಗೆ ತುಂಬಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿರುವ ಮರದ ದಿಮ್ಮಿಗಳನ್ನು ತೆರವುಗೊಳಿಸಿ, ಹಾಳಾಗಿರುವ ರಸ್ತೆ ಅಂಚುಗಳನ್ನು ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯ ಹೆದ್ದಾರಿ ಬದಿಯಲ್ಲಿ ಟಿಂಬರ್ ಲಾರಿಗಳನ್ನು ನಿಲ್ಲಿಸಿಕೊಂಡು ಮರ ತುಂಬುದಕ್ಕೆ ಅವಕಾಶವಿಲ್ಲ. ಮರ ತುಂಬಿಸುವುದು ನಮ್ಮ ಗಮನಕ್ಕೆ ಬಂದಿಲ್ಲ. ನಿಯಮ ಮೀರಿ ರಾಜ್ಯ ಹೆದ್ದಾರಿಯಲ್ಲಿ ಮರದ ದಿಮ್ಮಿಗಳನ್ನು ಸಂಗ್ರಹಿಸಿ, ರಸ್ತೆ ಹಾಳು ಮಾಡುವುದರೊಂದಿಗೆ, ವಾಹನ ಸಂಚಾರಕ್ಕೆ ಅಡಚಣೆ ಮಾಡುವವರ ವಿರುದ್ದ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

- ಕುಮಾರ್, ಎಇಇ, ಲೋಕೋಪಯೋಗಿ ಇಲಾಖೆ, ಸೋಮವಾರಪೇಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಲಸೌಕರ್ಯ ಅಭಿವೃದ್ಧಿ: ಆಯುಕ್ತರಿಂದ ವಿವಿಧೆಡೆ ಪರಿಶೀಲನೆ
ಅಧ್ಯಾಪಕರು ಹೊಸ ಜ್ಞಾನ, ತಂತ್ರಜ್ಞಾನ ಕಲಿಯಬೇಕು: ಆ್ಯಂಟನಿ ಪ್ರಕಾಶ್ ಮೊಂತೇರೊ