- ಗೂಡ್ಸ್ ವಾಹನ, 3770 ಕೆಜಿ ರಾಗಿ ವಶ । ಬಡಾವಣೆ ಪೊಲೀಸರ ಕಾರ್ಯಾಚರಣೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಪಡಿತರ ವ್ಯವಸ್ಥೆಯಡಿ ಜನರಿಗೆ ಪೂರೈಸಿದ್ದ ರಾಗಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ದಾವಣಗೆರೆ ಎಪಿಎಂಸಿಯಲ್ಲಿ ಮಾರಾಟ ಮಾಡಲೆಂದು ಅಕ್ರಮವಾಗಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಜಪ್ತಿ ಮಾಡಿ, ₹1.13 ಲಕ್ಷಕ್ಕೂ ಅಧಿಕ ಮೌಲ್ಯದ ಒಟ್ಟು 3770 ಕೆಜಿ ಪಡಿತರ ರಾಗಿ ಹಾಗೂ ಆರೋಪಿಯನ್ನು ನಗರದ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹರಿಹರ ತಾಲೂಕು ಮಲೇಬೆನ್ನೂರು ಪಟ್ಟಣದ ವಾಸಿ, ಗುಜರಿ ವ್ಯಾಪಾರಿ ಸೈಯದ್ ಇರ್ಷಾದ್ ಅಲಿ (28) ಬಂಧಿತ ಆರೋಪಿ. ಮಲೇಬೆನ್ನೂರು ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಜನರಿಂದ ಕಡಿಮೆ ಬೆಲೆಗೆ ಪಡಿತರ ವ್ಯವಸ್ಥೆಯಡಿ ಪೂರೈಸಿದ್ದ ರಾಗಿಯನ್ನು ಖರೀದಿಸಿ, ಅದನ್ನು ದಾವಣಗೆರೆ ಎಪಿಎಂಸಿಯಲ್ಲಿ ಮಾರಾಟ ಮಾಡಲೆಂದು ಆರೋಪಿ ಸೈಯದ್ ಇರ್ಷಾದ್ ಅಲಿ ನ.2ರಂದು ಪಿಜೆ ಬಡಾವಣೆ 8ನೇ ಮುಖ್ಯರಸ್ತೆಯ ಮೋತಿ ವೀರಪ್ಪ ಕಾಲೇಜು ಪಕ್ಕದ ರಸ್ತೆಯಲ್ಲಿ ವಿಂಟ್ರಾ ವಿ-30 ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದನು.ಖಚಿತ ಮಾಹಿತಿ ದೊರೆತ ಮೇರೆಗೆ ಎಸ್‌ಪಿ ಕಚೇರಿಯ ಪಿಎಸ್ಐ ಸಾಗರ್ ಅತ್ತರ್ ವಾಲಾ ಹಾಗೂ ಸಿಬ್ಬಂದಿ, ಬಡಾವಣೆ ಠಾಣೆ ಪಿಎಸ್ಐ ಅನ್ನಪೂರ್ಣಮ್ಮ, ಸಿಬ್ಬಂದಿ ಹಾಗೂ ಆಹಾರ ನಿರೀಕ್ಷಕ ಟಿ.ಮಂಜುನಾಥ ದಾಳಿ ಮಾಡಿದರು. ವಾಹನದಲ್ಲಿದ್ದ ಮಲೇಬೆನ್ನೂರಿನ ಸೈಯದ್ ಇರ್ಷಾದ್ ಅಲಿಗೆ ಬಿಲ್ ಕೊಡುವಂತೆ ಕೇಳಿದ್ದಾರೆ. ಆಗ ತನ್ನಲ್ಲಿ ಯಾವುದೇ ಬಿಲ್ ಇಲ್ಲ. ಮಲೇಬೆನ್ನೂರು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಜನಗಳಿಂದ ಪಡಿತರ ವ್ಯವಸ್ಥೆಯ ರಾಗಿ ಕಡಿಮೆ ಬೆಲೆ ಖರೀದಿಸಿ, ಎಪಿಎಂಸಿಗೆ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ಬಾಯಿಬಿಟ್ಟಿದ್ದಾನೆ.
ಅನ್ನಭಾಗ್ಯ ಯೋಜನೆ ಪಡಿತರ ರಾಗಿ ಅನಧಿಕೃತವಾಗಿ ಸಂಗ್ರಹಿಸಿದ್ದು ಖಚಿತವಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ವಾಹನದ ಸಮೇತ ರಾಗಿ ಜಪ್ತಿ ಮಾಡಲಾಯಿತು. ಸಿಬ್ಬಂದಿ ಗೋವಿಂದರಾಜ, ಶಿವರಾಜ, ಮಂಜುನಾಥ, ಷಣ್ಮುಖ, ಪ್ರಕಾಶ, ಅಂಜಿನಪ್ಪ, ಅಜ್ಜಯ್ಯ, ನಾಗಪ್ಪ ಹೊಸಮನಿ ಅವರ ಕಾರ್ಯವನ್ನು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.- - -
-7ಕೆಡಿವಿಜಿ7.ಜೆಪಿಜಿ:ಪಡಿತರ ರಾಗಿ ದಾವಣಗೆರೆ ಎಪಿಎಂಸಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಡಾವಣೆ ಪೊಲೀಸರು ವಶಕ್ಕೆ ಪಡೆದು ಗೂಡ್ಸ್ ವಾಹನ ಹಾಗೂ 3770 ಕೆಜಿ ರಾಗಿ ವಶಪಡಿಸಿಕೊಂಡರು.