ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಹೋದ ಗಣತಿದಾರರಿಗೆ ಮಾಹಿತಿ ನೀಡುವ ಜತೆ ಬಾಗಿನ ಕೊಟ್ಟು ಸತ್ಕರಿಸಿದ ಘಟನೆ ನಂದಿನಿ ಲೇಔಟ್‌ನಲ್ಲಿ ಗುರುವಾರ ನಡೆದಿದೆ.ಗಣತಿಗೆ ನೇಮಕೊಂಡಿರುವ ಶಿಕ್ಷಕಿಯೊಬ್ಬರು ನಂದಿನಿ ಲೇಔಟ್ ಮನೆಯೊಂದಕ್ಕೆ ಭೇಟಿ ನೀಡಿದ ವೇಳೆ ಗಣತಿದಾರರಿಗೆ ಮಾಹಿತಿ ನೀಡಿದ ನಂತರ ಮನೆಯ ಸದಸ್ಯರು ಶಿಕ್ಷಕಿಗೆ ಅರಿಶನ,ಕುಂಕುಮ ಕೊಟ್ಟು ಬಾಗಿನ ನೀಡಿದ್ದಾರೆ. ಶಿಕ್ಷಕಿ ಸಂತೋಷದಿಂದ ಸ್ವೀಕರಿಸಿದ್ದಾರೆ.
ವಿಶೇಷ ಆಯುಕ್ತರಿಂದಲೇ ಅಸಹಕಾರ ಆರೋಪಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಂದಾಯ ವಿಭಾಗದ ವಿಶೇಷ ಆಯುಕ್ತರು ಸಮೀಕ್ಷೆಗೆ ಸಹಕಾರ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿಶೇಷ ಆಯುಕ್ತರ ಮನೆಗೆ ಸಮೀಕ್ಷೆದಾರರು ಮೂರು ಬಾರಿ ತೆರಳಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಮನೆಯ ಕಾಲಿಂಗ್ ಬೆಲ್ ಮಾಡಿದಾಗ ಯಾರೂ ಮನೆಯ ಬಾಗಿಲು ತೆರೆಯದ ಕಾರಣ ಸಂದೇಶ ಕಳುಹಿಸಿದ್ದೇವೆ. ಪ್ರತಿಕ್ರಿಯೆ ನೀಡಿಲ್ಲ ಅಂತಾ ಅಪ್ಡೇಟ್ ಮಾಡಿ ಎಂದು ಹಿರಿಯ ಅಧಿಕಾರಿಗಳು ಸೂಚಿಸಲಾಗಿದೆ.
ಶಿವರಾಜ್ ಕುಮಾರ್ ಸಮೀಕ್ಷೆಯಲ್ಲಿ ಭಾಗಿಹಿರಿಯ ನಟ ಡಾ. ಶಿವರಾಜ್ ಕುಮಾರ್ ಅವರ ಮಾನ್ಯತಾ ರೆಸಿಡೆನ್ಸಿ ಮನೆಗೆ ಗುರುವಾರ ಭೇಟಿ ನೀಡಿದ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ನೇತೃತ್ವದ ತಂಡ ಗಣತಿ ನಡೆಸಿತು. ಶಿವರಾಜ್ ಕುಮಾರ್ ಸಮೀಕ್ಷೆಗೆ ಸಹಕಾರ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗಣತಿದಾರ ಆಸ್ಪತ್ರೆಗೆ ದಾಖಲುಸಮೀಕ್ಷೆ ಕೆಲಸ ಕಾರ್ಯಗಳನ್ನು ಒತ್ತಡದಲ್ಲಿ ನಿರ್ವಹಿಸುವ ಸಂದರ್ಭದಲ್ಲಿ ಹೃದಯಾಘಾತವಾಗಿ ಕಂದಾಯ ವಸೂಲಿಗಾರ ಉಮೇಶ್ ಎಂಬುವರನ್ನು ನಗರದ ಮಲ್ಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ನಗರದಲ್ಲಿ 96 ಲಕ್ಷ ಮನೆ ಸಮೀಕ್ಷೆಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ 8.30ರ ವೇಳೆ 96,979 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ. ಕಳೆದ 13 ದಿನದಲ್ಲಿ 16,41,366 ಮನೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ 2,18,423 ಮನೆ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಪೂರ್ವ ನಗರ ಪಾಲಿಕೆ 2,56,676, ಉತ್ತರ ನಗರ ಪಾಲಿಕೆ 3,99,576, ದಕ್ಷಿಣ ನಗರ ಪಾಲಿಕೆ 3,01,948 ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 4,64,743 ಮನೆ ಸಮೀಕ್ಷೆ ಪೂರ್ಣಗೊಳಿಸಲಾಗಿದೆ ಎಂದು ಜಿಬಿಎ ಮಾಹಿತಿ ನೀಡಿದೆ.