ಹೊಸಪೇಟೆ:
ವಿಜಯನಗರ ಜಿಲ್ಲಾದ್ಯಂತ ಶನಿವಾರ ಸುರಿದ ಮಳೆಗೆ ಹಂಪಿ ಸೇರಿದಂತೆ ವಿವಿಧೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ನಗರ ರಾಯರ ಕೆರೆ ಪ್ರದೇಶದಲ್ಲಿ ಜಮೀನಿಗೆ ಮಳೆ ನೀರು ನುಗ್ಗಿದೆ.ಹಂಪಿ ವಿರೂಪಾಕ್ಷೇಶ್ವರ ರಥ ಬೀದಿಯ ಸಾಲು ಮಂಟಪ ಬಳಿಯ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ಹಂಪಿ ಪೊಲೀಸ್ ಠಾಣೆ ಸಮೀಪದಲ್ಲೇ ಇರುವ ಗೂಡಂಗಡಿ ಮೇಲೆ ಮರ ಉರುಳಿ ಬಿದ್ದಿದ್ದು, ಅಂಗಡಿ ಜಖಂಗೊಂಡಿದೆ. ಇದರಿಂದ ಕೋದಂಡರಾಮ ದೇವಾಲಯಕ್ಕೆ ತೆರಳುವ ಮಾರ್ಗ ಸ್ಥಗಿತಗೊಂಡಿದೆ. ಪ್ರವಾಸಿಗರು ಬದಲಿಗೆ ಮಾರ್ಗದ ಮೂಲಕ ದೇವಾಲಯಕ್ಕೆ ತೆರಳಿದರು. ವಿಜಯವಿಠಲ ದೇವಸ್ಥಾನಕ್ಕೆ ತೆರಳುವ ದೇಶಿ-ವಿದೇಶಿ ಪ್ರವಾಸಿಗರ ವಾಹನಗಳು ಗೆಜ್ಜಲ ಮಂಟಪದ ಪಾರ್ಕಿಂಗ್ ಪ್ರದೇಶದ ಕೆಸರಿನಲ್ಲಿ ಸಿಲುಕಿಕೊಂಡಿದ್ದವು ಈ ವಾಹನ ಹೊರ ತೆಗೆಯಲು ಪ್ರವಾಸಿಗರು ಪರದಾಡುವಂತಾಯಿತು.
ಮಳೆ ಹೊಡೆತಕ್ಕೆ ಜಿಲ್ಲೆ ಸೇರಿದಂತೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಬಾರಿ ಮಳೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ:ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ವಿಜಯನಗರ ಸಹಯೋಗದಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಇಚ್ಛಿಸುವ ಎಲ್ಲ ವರ್ಗದ ಯುವಕ ಮತ್ತು ಯುವತಿಯರಿಗೆ ಒಂದು ದಿನದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮವನ್ನು ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಡಾಕ್ ಜಂಟಿ ನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.ಸ್ವಂತ ಉದ್ಯಮ ಸ್ಥಾಪಿಸಲು ಬಯಸುವ ಆಸಕ್ತರಿಗೆ ಮತ್ತು ಸ್ವಂತ ಉದ್ಯಮ ಸ್ಥಾಪನೆಗಾಗಿ ಸರ್ಕಾರದಿಂದ ಹಾಗೂ ಹಣಕಾಸು ಸಂಸ್ಥೆಯಿಂದ ಪ್ರೋತ್ಸಾಹ ನೀಡಿ ಮುಂದೆ ಕೈಗೊಳ್ಳಲಾಗುವ ಉದ್ಯಮಶೀಲತಾಭಿವೃದ್ಧಿ ತರಬೇತಿ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.ಆಸಕ್ತರು ಜು. 21ರೊಳಗಾಗಿ ಹೆಸರು ನೋಂದಾಯಿಸಬೇಕು. ಕನಿಷ್ಠ 18 ವರ್ಷದವರಾಗಿರಬೇಕು. ಓದಲು ಮತ್ತು ಬರೆಯಲು ಬರಬೇಕು. ಹೆಚ್ಚಿನ ಮಾಹಿತಿಗಾಗಿ ಮೊ: 636281190, 9986332736 ಸಂಖ್ಯೆಗೆ ಕರೆಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.