ಮರಳು ಅಕ್ರಮ ಸಾಗಾಣೆ ತಡೆಗೆ ಟ್ರಂಚ್‌ ನಿರ್ಮಾಣ

KannadaprabhaNewsNetwork | Published : Mar 16, 2025 1:49 AM

ಸಾರಾಂಶ

ತಾಲೂಕಿನ ಮದಲಗಟ್ಟಿ ಬಳಿಯ ತುಂಗಭದ್ರಾ ನದಿ ನೀರಿನ ಸುಳಿಗೆ ಸಿಕ್ಕು, ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ತಾಲೂಕಾಡಳಿತ ಎಚ್ಚರಿಕೆಯ ನಾಮಫಲಕ ಅಳವಡಿಸಿ ಮರಳು ಅಕ್ರಮ ಸಾಗಾಣೆಗೆ ತಡೆಗೆ ನದಿ ತೀರದಲ್ಲಿ ಟ್ರಂಚ್‌ ತೆಗೆಯಲು ಮುಂದಾಗಿದೆ.

ಮದಲಗಟ್ಟಿಯಲ್ಲಿ ಎಚ್ಚರಿಕೆ ನಾಮಫಲಕ ಅಳವಡಿಕೆ

ಫಲಶೃತಿ ಸುದ್ದಿಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಮದಲಗಟ್ಟಿ ಬಳಿಯ ತುಂಗಭದ್ರಾ ನದಿ ನೀರಿನ ಸುಳಿಗೆ ಸಿಕ್ಕು, ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ತಾಲೂಕಾಡಳಿತ ಎಚ್ಚರಿಕೆಯ ನಾಮಫಲಕ ಅಳವಡಿಸಿ ಮರಳು ಅಕ್ರಮ ಸಾಗಾಣೆಗೆ ತಡೆಗೆ ನದಿ ತೀರದಲ್ಲಿ ಟ್ರಂಚ್‌ ತೆಗೆಯಲು ಮುಂದಾಗಿದೆ.

ಮದಲಗಟ್ಟಿ ಆಂಜನೇಯ ಸ್ವಾಮಿ ದರ್ಶನಕ್ಕೆ ಬಂದ ಭಕ್ತರು ಬಿಸಿಲಿನ ತಾಪ ತಾಳದೇ ನದಿಯಲ್ಲಿ ಸ್ನಾನ ಮಾಡಲು ಹೋಗಿ ನೀರಿನ ಸುಳಿಗೆ ಸಿಕ್ಕು ಸರಣಿ ಸಾವಿನ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಮರಳಿನ ಗುಂಡಿಯಲ್ಲಿ ಮುಂದುವರೆದ ಮರಣ ಮೃದಂಗ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಪರಿಣಾಮ ತಾಲೂಕಾಡಳಿತ ನದಿ ತೀರದಲ್ಲಿ ಅಪಾಯಕಾರಿ ಸುಳಿಗಳಿವೆ ದೇವಸ್ಥಾನದ ಸುತ್ತಲ್ಲೂ ಚಿತಾಭಸ್ಮ ಯಾರು ವಿಸರ್ಜನೆ ಮಾಡಬಾರದು ಎಂದು ಎಚ್ಚರಿಕೆಯ ನಾಮಫಲಕ ಅಳಡಿಸಿದ್ದಾರೆ.

ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದಂತೆಯೇ ಮರಳು ಅಕ್ರಮ ಸಾಗಾಣಿಕೆ ದಂಧೆ ಎಗ್ಗಿಲ್ಲದೇ ಸಾಗುತ್ತಿದೆ. ಈ ಹಿಂದೆ ಇದೇ ಮರಳು ಅಕ್ರಮ ದಂಧೆಕೋರರು ದೊಡ್ಡ ಪ್ರಮಾಣದಲ್ಲಿ ಗುಂಡಿಗಳನ್ನು ನಿರ್ಮಾಣ ಮಾಡಿದ್ದರು. ಇದೇ ಗುಂಡಿಗಳಲ್ಲಿ ಸ್ನಾನ ಮಾಡಲು ಹೋಗಿದ್ದ ಯುವಕರು, ಸಾವಿನ ಗುಂಡಿಯಲ್ಲಿ ಬಿದ್ದು ಮರಣ ಹೊಂದಿದ್ದರು. ಮದಲಗಟ್ಟಿ ಸೇತುವೆ ಕೆಳಗಿನ ಮರಳನ್ನು ಅಕ್ರಮ ಸಾಗಾಣೆ ಮಾಡುವ ದಂಧೆಕೋರರನ್ನು ತಡೆಯಲು ತಾಲೂಕಾಡಳಿತ ನದಿ ತೀರದಲ್ಲಿ ಟ್ರಂಚ್‌ ನಿರ್ಮಾಣ ಮಾಡಿದೆ. ಇದರಿಂದ ನದಿ ತೀರಕ್ಕೆ ವಾಹನಗಳು ಇಳಿಯದಂತೆ ಮರಳು ಅಕ್ರಮ ದಂಧೆಗೆ ಬ್ರೇಕ್‌ ಹಾಕುವ ಪ್ರಯತ್ನ ಮಾಡಿದ್ದಾರೆ.ನದಿಯಲ್ಲಿನ ಸುಳಿ ಇರುವ ಜಾಗದಲ್ಲಿ ಸ್ನಾನಕ್ಕೆ ಯಾರು ಹೋಗದಂತೆ ಎಚ್ಚರಿಕೆಯ ನಾಮಫಲಕ ಅಳವಡಿಸಲಾಗಿದೆ. ಸೇತುವೆಯ ತಳ ಭಾಗದಲ್ಲಿ ಮರಳಿನ ಗುಂಡಿ ನಿರ್ಮಾಣ ತಪ್ಪಿಸುವುದು ಸೇರಿದಂತೆ ಮರಳು ಅಕ್ರಮ ತಡೆಗೆ ನದಿ ತೀರದಲ್ಲಿ ಟ್ರಂಚ್‌ ತೆಗೆಯಲಾಗಿದೆ ಎಂದು ತಹಸೀಲ್ದಾರ್‌ ಜಿ. ಸಂತೋಷಕುಮಾರ್‌ ತಿಳಿಸಿದ್ದಾರೆ.

Share this article