ಕನ್ನಡಪ್ರಭ ವಾರ್ತೆ ಮಂಡ್ಯ
ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ಧಿ ದಿ.ಎಸ್.ಎಂ.ಕೃಷ್ಣರಿಗೆ ನಗರದಲ್ಲಿ ದೊಡ್ಡದಾಗಿ ಶ್ರದ್ಧಾಂಜಲಿ ಸಭೆ ಆಯೋಜಿಸಿ ಗೌರವ ನಮನ ಸಲ್ಲಿಸಲಾಗುವುದು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದರು.ನಗರದ ಹರಿಪ್ರಿಯ ಹೋಟೆಲ್‌ನ ಸಭಾಂಗಣದಲ್ಲಿ ದಿವ್ಯಚೇತನ ಎಸ್.ಎಂ.ಕೃಷ್ಣ ಸಂಸ್ಮರಣ ವೇದಿಕೆಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಂಡ್ಯದಂತಹ ಪುಣ್ಯ ಭೂಮಿಯಲ್ಲಿ ಜನಿಸಿ ನಾಡು, ಈ ದೇಶದಲ್ಲಿ ಅದ್ವಿತೀಯ ನಾಯಕರಾಗಿ ಬೆಳೆದ ಎಸ್.ಎಂ.ಕೃಷ್ಣರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಎಸ್.ಎಂ.ಕೃಷ್ಣರ ಶ್ರದ್ಧಾಂಜಲಿ ಸಭೆಯನ್ನು ನಗರದ ಅಂಬೇಡ್ಕರ್ ಭವನ ಅಥವಾ ಜಿಲ್ಲಾ ಸರ್ ಎಂವಿ ಕ್ರೀಡಾಂಗಣದಲ್ಲಿ ಆಯೋಜಿಸಬೇಕೆ ಎಂಬ ಬಗ್ಗೆ ಸಭೆಯಲ್ಲಿ ಕೋರ್ ಕಮಿಟಿ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲು ಸೂಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು, ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೊಡ್ಡದಾಗಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಮಾತನಾಡಿ, ಈ ರಾಷ್ಟ್ರ ಕಂಡ ಅಪರೂಪದ ರಾಜಕಾರಣಿಯಾಗಿರುವ ದಿ.ಎಸ್.ಎಂ.ಕೃಷ್ಣರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಗೌರವ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ವಕೀಲ ಟಿ.ಎಸ್.ಸತ್ಯಾನಂದ ಮಾತನಾಡಿ, ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಿ ಡಿಸಿಎಂ ಡಿ.ಕೆ.ಶಿವಕುಮಾರ್ , ಸಚಿವ ಚಲುವರಾಯಸ್ವಾಮಿ, ಜಿಲ್ಲೆಯ ಶಾಸಕರು, ಮಾಜಿ ಶಾಸಕರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದರು.ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮಂಗಲ ಟಿ.ತಿಮ್ಮೇಗೌಡ, ಡಾ.ಬಿ.ಆರ್.ರವಿಕಾಂತೇಗೌಡ, ಪ್ರೊ.ಬಿ.ಶಿವಲಿಂಗಯ್ಯ, ಕೆ.ಟಿ.ಶ್ರೀಕಂಠೇಗೌಡ, ಎ.ಸಿ.ರಮೇಶ್ , ಡಾ.ಸಿದ್ದರಾಮಯ್ಯ, ಚಂದಗಾಲು ಶಿವಣ್ಣ, ಜಿ.ಟಿ.ವೀರಪ್ಪ, ಹಾಲಹಳ್ಳಿ ರಾಮಲಿಂಗಯ್ಯ, ಬಿ.ಸಿ.ಶಿವಾನಂದ ಸೇರಿದಂತೆ ಎಸ್ ಎಂಕೆ ಹಿತೈಸಿಗಳು, ಅಭಿಮಾನಿಗಳು ಭಾಗವಹಿಸಿದ್ದರು.
ತಾಲೂಕು ಆಡಳಿತದಿಂದ ಕುವೆಂಪು ಜಯಂತಿ ಆಚರಣೆಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಾಲೂಕು ಆಡಳಿತದಿಂದ ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ತಹಸೀಲ್ದಾರ್ ಅಖಿಲ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಬಿಇಒ ಆರ್.ಪಿ.ಮಹೇಶ್ ಮಾತನಾಡಿ, ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು 20ನೇ ಶತಮಾನ ಕಂಡ ಅದ್ಭುತ ಕವಿಗಳಲ್ಲಿ ಒಬ್ಬರು.ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ, 2ನೇ ರಾಷ್ಟ್ರ ಕವಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು ಎಂದರು.
ಈ ವೇಳೆ ಕುವೆಂಪು ಆಚರಣೆ ಸಮಿತಿ ಅಧ್ಯಕ್ಷ ಸಿ.ಸ್ಚಾಮಿಗೌಡ, ಕರ್ನಾಟಕ ಒಕ್ಕಲಿಗರ ಸಂಘ ಅಧ್ಯಕ್ಷ ಗೌಡಳ್ಳಿ ದೇವರಾಜ್, ರಕ್ಷಣಾ ವೇದಿಕೆ ಅಧ್ಯಕ್ಷ ಚಂದಗಾಲ್ ಶಂಕರ್, ಪುರಸಭೆ ಸದಸ್ಯಎಸ್ ಪ್ರಕಾಶ್, ಕೆಂಪೇಗೌಡ ಯುವಶಕ್ತಿ ವೇದಿಕೆ ಅಧ್ಯಕ್ಷ ಕಾಳೇನಹಳ್ಳಿ ಮಹೇಶ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಲಿಂಗು, ಚಿಕ್ಕ ಪಾಳ್ಯ ಪುರುಷೋತ್ತಮ್, ಆನಂದ್, ಕಸಾಪ ಬಸವರಾಜ್, ಸೋಮು ಸೇರಿದಂತೆ ಇತರರು ಉಪಸ್ಥಿತರಿದ್ದರು.