ಹಳಿಯಾಳ: ಆಪರೇಶನ್ ಸಿಂದೂರ್ ಯಶಸ್ವಿ ಕಾರ್ಯಾಚರಣೆ ನಡೆಸಿದ ನಮ್ಮ ಹೆಮ್ಮೆಯ ಭಾರತೀಯ ಸೇನಾಪಡೆಗೆ ಗೌರವಾರ್ಪಣೆ ಸಲ್ಲಿಸಲು ಸೋಮವಾರ ಪಟ್ಟಣದಲ್ಲಿ ತಿರಂಗಾ ಯಾತ್ರೆ ನಡೆಯಿತು.ಪಟ್ಟಣದ ಗಣೇಶ ದೇವಸ್ಥಾನದಿಂದ ಆರಂಭಗೊಂಡ ತಿರಂಗಾ ಯಾತ್ರೆಯು ಮುಖ್ಯ ಬೀದಿಗಳಲ್ಲಿ ಸಾಗಿ ಶಿವಾಜಿ ವೃತ್ತದಲ್ಲಿ ಬಂದು ಮುಕ್ತಾಯಗೊಂಡಿತು.
ಮಾಜಿ ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ಮುಗ್ಧ ಜನರನ್ನು ಹತ್ಯೆ ಮಾಡಿ ಭಾರತದಲ್ಲಿ ಭಯದ ವಾತಾವರಣ ಪಾಕಿಸ್ತಾನವು ಮಾಡುತ್ತಿತ್ತು. ಆದರೆ ಭಾರತ ಮಾತೆಯ ಹೆಮ್ಮೆಯ ಪುತ್ರರಾಗಿ ಪ್ರಧಾನಿ ಮೋದಿ ದೇಶದ ಘನತೆಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುವ ಮೂಲಕ ಎಲ್ಲರಲ್ಲೂ ದೇಶಪ್ರೇಮವನ್ನು ಜಾಗೃತಗೊಳಿಸಿದ್ದಾರೆ ಎಂದರು.
ಯಾತ್ರೆಯುದ್ದಕ್ಕೂ ಭಾರತೀಯ ಸೈನಿಕರಿಗೆ ಜೈ ಘೋಷಣೆ ಹಾಕಿ ನೈತಿಕ ಬೆಂಬಲ ಘೋಷಿಸಲಾಯಿತು. ದೇಶಭಕ್ತಿ ಗೀತೆಗಳೊಂದಿಗೆ ತಿರಂಗಾ ಹಿಡಿದು ನೂರಾರು ಜನ ಮೆರವಣಿಗೆಯಲ್ಲಿ ಹೆಜ್ಜೆಯಿಟ್ಟರು.ಮಾಜಿ ಸೈನಿಕರು, ನಿವೃತ್ತ ಸರ್ಕಾರಿ ನೌಕರರು, ಕರವೇ, ಹಿರಿಯ ನಾಗರಿಕ ವೇದಿಕೆಯ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.