ಗಣ್ಯರು, ಸಹೋದ್ಯೋಗಿಗಳಿಂದ ಪತ್ರಕರ್ತೆಗೆ ನುಡಿನಮನ । ಕುಟುಂಬದವರಿಗೆ ಪತ್ರಕರ್ತ ಸಂಘದಿಂದ ಸಾಂತ್ವಾನ
ಕಳೆದ ಜನವರಿ 31ರಂದು ಅಗಲಿದ ಹಿರಿಯ ಪತ್ರಕರ್ತೆ ಭುವನೇಶ್ವರಿಯವರಿಗೆ ನಗರದ ಕನ್ನಡ ಭವನದಲ್ಲಿಂದು ಗಣ್ಯರು, ಸಹೋದ್ಯೋಗಿಗಳು ನುಡಿ ನಮನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಕ್ರಿಯಾಶೀಲ ವರದಿಗಾರರಾಗಿದ್ದ ಭುವನೇಶ್ವರಿಯವರ ಅಗಲಿಕೆಯಿಂದ ಜಿಲ್ಲೆಯ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ರಾಷ್ಟ್ರೀಯ ಪತ್ರಿಕೆಯಲ್ಲಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಅವರ ವಸ್ತುನಿಷ್ಠ ವರದಿಗಾರಿಕೆಯಿಂದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದು ಭಾವಿಸುತ್ತೇನೆ. ಅನಿರೀಕ್ಷಿತವಾಗಿ ನಮ್ಮೆಲ್ಲರನ್ನು ಅಗಲಿರುವುದು ದುಃಖದ ಸಂಗತಿ. ಭಗವಂತನು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.ಪರಿಸರವಾದಿ ಯತಿರಾಜು ಮಾತನಾಡಿ, ವೃತ್ತಿ ಧರ್ಮದಲ್ಲಿ ಬದ್ಧತೆ ಹೊಂದಿದ್ದ ದಿವಂಗತ ಭುವನೇಶ್ವರಿಯವರು ಮಾಧ್ಯಮ ಕ್ಷೇತ್ರವನ್ನು ಶ್ರೀಮಂತವಾಗಿಸಿದವರಲ್ಲಿ ಒಬ್ಬರಾಗಿದ್ದರು. ಆಂಗ್ಲ ಪತ್ರಿಕೆಗಳಲ್ಲಿ ಸ್ಥಳೀಯ ಸುದ್ದಿಗಳಿಗೆ ಅವಕಾಶ ಕಡಿಮೆ. ಇವರ ಉತ್ತಮ ಬರಹದಿಂದ ವಾರಕ್ಕೆರಡು ಲೇಖನಗಳು ಹಿಂದೂ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ ಚಿ.ನೀ. ಪುರುಷೋತ್ತಮ್ ಮಾತನಾಡಿ, ಭುವನೇಶ್ವರಿಯವರು ಜಿಲ್ಲೆಯ ಏಕೈಕ ಮಹಿಳಾ ಪತ್ರಕರ್ತೆಯಾಗಿ ಉತ್ತಮ ವರದಿಗಳನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಅವರ ಅಗಲಿಕೆಯಿಂದ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ನೋವುಂಟಾಗಿದೆ.ಅವರ ಕುಟುಂಬದವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ೧೦ಸಾವಿರ ರು. ನೀಡಲಾಗಿದ್ದು, ರಾಜ್ಯ ಸಂಘದಿಂದಲೂ ನೀಡಲಾಗುವುದು. ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುವ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಪತ್ರಕರ್ತರಾದ ಸೊಗಡು ವೆಂಕಟೇಶ್, ಶಶಿಧರ್ ದೋಣಿಹಕ್ಲು, ರಂಗರಾಜು, ಪಿ.ಡಿ. ಈರಣ್ಣ, ಸಾ.ಚಿ. ರಾಜಕುಮಾರ್, ಸುಬ್ರಹ್ಮಣ್ಯ, ಜಗನ್ನಾಥ್ ಕಾಳೇನಹಳ್ಳಿ, ಟಿ.ಎಚ್. ಸುರೇಶ್, ಪರಮೇಶ್, ದಿ.ಭುವನೇಶ್ವರಿ ಅವರ ಪತಿ ಪ್ರಕಾಶ್ ನುಡಿ ನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.