ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಉತ್ತಮೀಕರಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶ್ರಮ, ಬೋಧಕ ಬೋಧಕೇತರರ ಶ್ರಮ, ನಮ್ಮ ಶ್ರಮ ಜನಗಳಿಗೆ ತಲುಪುವುದು ಅಂತಿಮವಾಗಿ ಪರೀಕ್ಷೆಯ ಫಲಿತಾಂಶ ಆಗಿದೆ.
ಈಗಾಗಲೇ ಸಾಕಷ್ಟು ಪರಿಶ್ರಮಪಟ್ಟಿದ್ದೀರಿ, ಆದರೂ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಾಗಿರುವುದರಿಂದ ವಿದ್ಯಾರ್ಥಿಗಳು ಕೊನೆಹಂತದಲ್ಲಿ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳದಂತೆ ಮಕ್ಕಳಿಗೆ ಮತ್ತಷ್ಟು ಮಾದರಿ ಪರೀಕ್ಷೆಗಳನ್ನು ಮಾಡಿ, ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯದಂತಹ ಕಷ್ಟವಾಗಿರುವ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಟ್ಟು, ಪುನರ್ ಮನನ ಮಾಡಿಸಿ ಎಂದು ತಿಳಿಸಿದರು.ಈ ಪರೀಕ್ಷೆಯು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಕೂಡ ಒಂದು ಪರೀಕ್ಷೆಯಾಗಿದೆ, ಪ್ರತಿಯೊಬ್ಬ ವಿದ್ಯಾರ್ಥಿ ಶಿಕ್ಷಕರನ್ನು ಅನುಸರಿಸುತ್ತಿರುತ್ತಾರೆ ಹಾಗಾಗಿ ಶಿಕ್ಷಕರಾದ ನೀವುಗಳು ತಾರತಮ್ಯ ಮಾಡದೆ ಎಲ್ಲ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡಿ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಪೂರ್ಣಿಮಾ ಬಿ ಆರ್ ಅವರು ಮಾತನಾಡಿ, ಮಕ್ಕಳಿಗೆ ಮೂಲಭೂತವಾಗಿ ಯಾವ ರೀತಿಯಲ್ಲಿ ಓದಬೇಕು ಯಾವ ರೀತಿಯಲ್ಲಿ ಪುನರ್ ಮನನ ಮಾಡಿಕೊಳ್ಳಬೇಕು ಹೇಗೆ ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಅಂಶಗಳ ಕುರಿತು ಮೊದಲು ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಜೊತೆಗೆ ಕಠಿಣವಾದ ವಿಷಯಗಳ ಕುರಿತು ಗಮನ ಹರಿಸಿ ವಿದ್ಯಾರ್ಥಿಗಳಿಗೆ ಕಲಿಸಿ ಹಾಗೂ ಪೋಷಕರ ಸಭೆಯನ್ನು ಮಾಡುವಂತೆ ತಿಳಿಸಿದರು.
ಪ್ರತಿಯೊಂದು ಶಾಲೆಯಲ್ಲಿಯೂ ಶಾಲೆಗೆ ಬರುವಂತಹ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು ಹಾಗೂ ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲೆಯಲ್ಲಿ ಒಂದು ಕನ್ನಡ ದಿನಪತ್ರಿಕೆ ಹಾಗೂ ಒಂದು ಆಂಗ್ಲ ದಿನಪತ್ರಿಕೆಯನ್ನು ಓದುವ ಹವ್ಯಾಸವನ್ನು ಹೇಳಿಕೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಡಯಟ್‌ನ ಹಿರಿಯ ಉಪನ್ಯಾಸಕರಾದ ಎಚ್.ಬಿ ಚಂದ್ರಶೇಖರ್, ಡಿಡಿಪಿಐ ಚಂದ್ರಶೇಖರ್, ಹಾಸನ ಡಯಟ್‌ನ ಉಪ ನಿರ್ದೇಶಕರಾದ ರಂಗನಾಥ ಸ್ವಾಮಿ ಹಾಗೂ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.