ಶಿರಸಿ: ಇಲ್ಲಿನ ಟಿಎಸ್‌ಎಸ್ ಸೊಸೈಟಿಯಲ್ಲಿ ಸುಮಾರು ₹೧೦೦ ಕೋಟಿ ಅವ್ಯವಹಾರ ನಡೆಸಿದ ಐವರ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಎಸ್‌ಎಸ್ ಸಂಸ್ಥೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿ, ಈಗಾಗಲೇ ೫ ಪ್ರಕರಣಗಳು ದಾಖಲಾಗಿದೆ. ಈಗ ೬ನೇ ಪ್ರಕರಣ ದಾಖಲಾಗಿದ್ದು, ಬರೋಬ್ಬರಿ ₹೧೦೦ ಕೋಟಿ ಅವ್ಯವಹಾರ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಹಿಂದಿನ ಪ್ರಧಾನ ವ್ಯವಸ್ಥಾಪಕ ರವೀಶ ಅಚ್ಯುತ್ ಹೆಗಡೆ, ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಉದ್ಯಮಿ ಅನಿಲ್‌ಕುಮಾರ ಮುಷ್ಟಗಿ, ಶಿರಸಿಯ ವಿನಾಯಕ ಕಾಲನಿಯ ಪ್ರವೀಣ ಹೆಗಡೆ ಮತ್ತು ಮಹಾಬಲೇಶ್ವರ ಹೆಗಡೆ ಮೇಲೆ ಪ್ರಕರಣ ದಾಖಲಾಗಿದೆ.ದಿ ತೋಟಗಾರ್ಸ್ ಕೋ- ಆಪರೇಟಿವ್ ಸೇಲ್ ಸೊಸೈಟಿಯ ಹಿಂದಿನ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಮತ್ತು ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಸಂಘದ ನಿವೃತ್ತ ಸಿಬ್ಬಂದಿಯಾದ ಅನಿಲಕುಮಾರ ಸಿದ್ದಪ್ಪ ಮುಷ್ಟಗಿ, ಹೊರಗಿನವರಾದ ಪ್ರವೀಣ ಮಹಾಬಲೇಶ್ವರ ಹೆಗಡೆ, ಮಹಾಬಲೇಶ್ವರ ಗಣಪತಿ ಹೆಗಡೆ ಅವರೊಂದಿಗೆ ಶಾಮೀಲಾಗಿ ೨೦೨೦ರ ಮೇ ೫ ರಿಂದ ೨೦೨೪ರ ಮೇ ೧೫ರ ಅವಧಿಯಲ್ಲಿ ಆರೋಪಿ ಅನಿಲಕುಮಾರ ಸಿದ್ದಪ್ಪ ಮುಷ್ಟಗಿ (ಖಾತೆ ಸಂಖ್ಯೆ ೧೦೬೭೩) ಈತನ ಹೆಸರಿನಲ್ಲಿ ₹೪೪,೦೯,೩೫,೫೮೬ ಹಣವನ್ನು ಆರೋಪಿ ಪ್ರವೀಣ ಮಹಾಬಲೇಶ್ವರ ಹೆಗಡೆ (ಖಾ.ಸಂ. ೨೮೨೯೬) ಈತನ ಹೆಸರಿನಲ್ಲಿ ₹೩೩,೬೬,೬೬,೩೯೩ ಹಾಗೂ ಆರೋಪಿ ಮಹಾಬಲೇಶ್ವರ ಗಣಪತಿ ಹೆಗಡೆ ಈತನ ಹೆಸರಿನಲ್ಲಿ ₹೨೨,೮೮,೮೬,೯೩೧ ಹೀಗೆ ಒಟ್ಟು ₹೧೦೦ ಕೋಟಿಗೂ ಹೆಚ್ಚು ದೊಡ್ಡ ಮೊತ್ತದ ಸಾಲವನ್ನು ತಮ್ಮ ಸ್ವಂತ ಲಾಭಕ್ಕಾಗಿ ಟಿಎಸ್ಎಸ್ ಸಂಘಕ್ಕೆ ಹಾನಿ ಮಾಡಿದ್ದಾರೆ.
ಈ ಐವರು ಆರೋಪಿತರು ಸಂಘದ ನಿಯಮಾವಳಿ, ಸಾಲ ವಿತರಣೆ, ವಿಧಿಸಿದ ಕನಿಷ್ಠ ಅರ್ಹತೆ, ಗರಿಷ್ಠ ಮಿತಿ, ಸೂಕ್ತ ಭದ್ರತೆ, ಮರುಪಾವತಿಸುವ ಸಾಮರ್ಥ್ಯ ಮತ್ತಿತರ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ತಮ್ಮ ಮನಬಂದಂತೆ ನಿಯಮ ಬಾಹಿರವಾಗಿ ಮೊದಲು ಹಣ ನೀಡಿ ನಂತರ ಸಾಲ ಮಂಜೂರಿ ಮಾಡಲಾಗಿದೆ. ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ನೀಡುವಾಗ ಸೂಕ್ತವಾದ ಯಾವುದೇ ಆಸ್ತಿಗಳ ಮೌಲ್ಯಮಾಪನ ಅಥವಾ ಕಾನೂನು ಸಲಹೆಯನ್ನು ಪಡೆಯದೇ ಸಂಘಕ್ಕೆ ವಂಚಿಸುವುದರ ಮೂಲಕ ಹಾನಿ ಮಾಡಿದ್ದಾರೆ. ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಶಿಕ್ಷೆ ನೀಡುವಂತೆ ಕ್ರಮ ಜರುಗಿಸಲು ಜೂ. ೪ರಂದು ಟಿಎಸ್‌ಎಸ್ ಸಂಸ್ಥೆಯ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಸುಬ್ರಹ್ಮಣ್ಯ ಭಟ್ಟ ದೂರು ನೀಡಿದ್ದಾರೆ.