ಮಂಗಳೂರು: ಪ್ರತಿಯೊಬ್ಬ ತುಳುವರ ಮನೆಯಲ್ಲಿ ತುಳು ಪುಸ್ತಕ ಓದುವಂತಾಗಬೇಕು, ಪ್ರತಿಯೊಬ್ಬ ತುಳುವರು ತಮ್ಮ ಮನೆಗೊಂದು ತುಳು ಪುಸ್ತಕವನ್ನು ಖರೀದಿಸಿ, ತುಳು ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಹಿರಿಯ ಸಂಶೋಧಕ ಹಾಗೂ ತುಳು ಅಕಾಡೆಮಿ ಮಾಜಿ ಸದಸ್ಯ ಬೆನೆಟ್ ಜಿ.ಅಮ್ಮನ್ನ ಹೇಳಿದರು.ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಹಯೋಗದಲ್ಲಿ ನಡೆದ ‘ಅಕಾಡೆಮಿಡ್ ಒಂಜಿ ದಿನ, ಬಲೆ ತುಳು ಓದುಗ’ ಸರಣಿಯ 16ನೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಓದುವ ಸಲುವಾಗಿ ನಡೆಯುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗವಹಿಸುತ್ತಾರೆ ಹಾಗೂ ಆಸಕ್ತಿಯಿಂದ ಓದುತ್ತಾರೆ ಎಂದರು.
ಎಸ್‌ಡಿಎಂ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಹಾಗೂ ಅಕಾಡೆಮಿ ಮಾಜಿ ಸದಸ್ಯ ಡಾ.ದಿವಾ ಕೊಕ್ಕಡ, ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ರವಿಶಂಕರ ಜಿ.ಕೆ., ವಿದ್ಯಾರ್ಥಿ ಸಂಚಾಲಕಿ ಸುಹಾ ಫಾತಿಮಾ, ಅಕಾಡೆಮಿ ಸದಸ್ಯರಾದ ಕುಂಬ್ರ ದುರ್ಗಾಪ್ರಸಾದ್ ರೈ, ಬೂಬ ಪೂಜಾರಿ ಮಳಲಿ, ಅಕ್ಷಯ ಆರ್. ಶೆಟ್ಟಿ ಇದ್ದರು.ಅಕಾಡೆಮಿ ಸದಸ್ಯ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ನಿರೂಪಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ವಂದಿಸಿದರು.