ಮಧುಗಿರಿ: ಶ್ರಾವಣ ಶನಿವಾರ ಪ್ರಯುಕ್ತ ಜಾತ್ರೆಗಾಗಿ ಮಾಡಿದ್ದ ಅಡುಗೆ ಸೇವಿಸಿ ಮೂವರು ಸಾವು!

Published : Aug 27, 2024, 05:52 AM IST
food poisoning

ಸಾರಾಂಶ

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬುಳ್ಳಾಸಂದ್ರ ಗ್ರಾಮದಲ್ಲಿ ಶ್ರಾವಣ ಶನಿವಾರ ಪ್ರಯುಕ್ತ ಗ್ರಾಮದ ಮುತ್ತರಾಯಸ್ವಾಮಿ ಜಾತ್ರೆಗಾಗಿ ಮಾಡಿದ್ದ ಅಡುಗೆ ಸೇವಿಸಿದ ಬಳಿಕ, ಬಾಂತಿ-ಭೇದಿ ಕಾಣಿಸಿಕೊಂಡು ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಮಧುಗಿರಿ :  ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬುಳ್ಳಾಸಂದ್ರ ಗ್ರಾಮದಲ್ಲಿ ಶ್ರಾವಣ ಶನಿವಾರ ಪ್ರಯುಕ್ತ ಗ್ರಾಮದ ಮುತ್ತರಾಯಸ್ವಾಮಿ ಜಾತ್ರೆಗಾಗಿ ಮಾಡಿದ್ದ ಅಡುಗೆ ಸೇವಿಸಿದ ಬಳಿಕ, ಬಾಂತಿ-ಭೇದಿ ಕಾಣಿಸಿಕೊಂಡು ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ದೇವರ ಜಾತ್ರೆಗಾಗಿ ಮಾಡಿದ್ದ ದೇವರ ಪ್ರಸಾದ ಸೇವನೆ ಇವರ ಸಾವಿಗೆ ಕಾರಣ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಆರೋಗ್ಯಾಧಿಕಾರಿಗಳು ಇದನ್ನು ತಳ್ಳಿಹಾಕಿದ್ದು, ಇಬ್ಬರು ವಯೋಸಹಜವಾಗಿ ಹಾಗೂ ಮತ್ತೊಬ್ಬ ಮಹಿಳೆ ವಾಂತಿ-ಭೇದಿಯಿಂದ ಸಾವನ್ನಪ್ಪಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಶ್ರಾವಣ ಶನಿವಾರದಂದು ಗ್ರಾಮದ ಮುತ್ತರಾಯಸ್ವಾಮಿ, ಕರಿಯಮ್ಮ ದೇವಿ ಮತ್ತು ಭೂತಪ್ಪ ಸ್ವಾಮಿ ದೇವರಿಗೆ ಹರಿಸೇವೆ ಕಾರ್ಯಕ್ರಮ ನಿಮಿತ್ತ ಜಾತ್ರೆ ಏರ್ಪಡಿಸಲಾಗಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಹರಿಸೇವೆ ಕಾರ್ಯಕ್ರಮ ಮಾಡಲಾಗುತ್ತದೆ. ಶನಿವಾರ ಹೆಣ್ಣುಮಕ್ಕಳು ಮುತ್ತರಾಯಸ್ವಾಮಿಗೆ ಆರತಿ ಬೆಳಗಿ ಸಂಜೆ ದೇವಸ್ಥಾನದಲ್ಲಿ ಪ್ರಸಾದವಾಗಿ ಅನ್ನ ಸಾಂಬಾರ್, ಹೆಸರು ಬೇಳೆ ಪಾಯಸವನ್ನು ಸ್ವೀಕರಿಸಿದ್ದರು.

ಪ್ರಸಾದ ಸೇವಿಸಿ ಮನೆಗೆ ವಾಪಸ್‌ ಮರಳಿದ ಬಳಿಕ ಕೆಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ತಿಮ್ಮಕ್ಕ (90) ಹಾಗೂ ಗಿರಿಯಮ್ಮ (80) ಎಂಬುವರು ಅದೇ ರಾತ್ರಿ ಸಾವನ್ನಪ್ಪಿದ್ದರು. ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದ ಕಾಟಮ್ಮ (40) ಎಂಬುವರನ್ನು ಮಧುಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ.

ಕಾಟಮ್ಮ ಸಾವಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅಸ್ವಸ್ಥರಾಗಿರುವ 12 ಮಂದಿಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. 6 ಮಂದಿಯನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ಕಣ್ಗಾವಲು ಅಧಿಕಾರಿ ರಾಮೇಗೌಡ, ಕಲುಷಿತ ಆಹಾರ ಸೇವನೆಯಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ವಾಂತಿ-ಭೇದಿಗೆ ಕಲುಷಿತ ಆಹಾರ ಸೇವನೆ ಕಾರಣವೇ?, ಅಲ್ಲವೆ ಎಂಬುದು ತನಿಖೆ ಬಳಿಕ ತಿಳಿದು ಬರಲಿದೆ ಎಂದು ತಿಳಿಸಿದರು.

PREV
Stay updated with the latest news from Tumkur district (ತುಮಕೂರು ಸುದ್ದಿ) — local politics, development, infrastructure, social issues, crime, environment and community affairs in the district on Kannada Prabha News.

Recommended Stories

ಯುವಕರು ಸ್ವ ಉದ್ಯೋಗಕ್ಕೆ ಮುಂದಾಗಿ
ಮಣ್ಣು ಪರೀಕ್ಷೆಯ ಆಧಾರದಲ್ಲಿ ಗೊಬ್ಬರ ಬಳಸಿ