ಕನ್ನಡಪ್ರಭವಾರ್ತೆ ತುರುವೇಕೆರೆಈ ಹಿಂದೆ ಜಾರಿಯಲ್ಲಿದ್ದ ಮೀಸಲಾತಿಯನ್ನೇ ಮುಂದುವರೆಸಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿ ಮಾ.24 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಓಂಕಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಸುಮಾರು 10 ಸಾವಿರ ಮಂದಿ ಈ ಬೃಹತ್ ಸಮಾವೇಶಕ್ಕೆ ತೆರಳುತ್ತಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರದ ವಿವಿಧ ಯೂನಿವರ್ಸಿಟಿ, ಪ್ರಾಧಿಕಾರ ಮತ್ತು ಕೆಲ ಇಲಾಖೆಗಳ ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿಗಳ ಪ್ರವರ್ಗ ಬಿ, ಪ್ರವರ್ಗ ಸಿ ಗುಂಪಿಗೆ ಶೂನ್ಯ ಹುದ್ದೆಗಳನ್ನು ಹಂಚಿಕೆ ಮಾಡಲಾಗಿತ್ತು. ಇದರಿಂದಾಗಿ ಒಳಮೀಸಲಾತಿ ಅವೈಜ್ಞಾನಿಕವಾದದು ಎಂದು ಜಗಜ್ಜಾಹೀರಾಗಿದೆ. ಈ ಅನ್ಯಾಯವನ್ನು ಖಂಡಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯ ಸಮಿತಿಯ ನೇತೃತ್ವದಲ್ಲಿ ನಾಡಿನ ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ, ಚರ್ಮಕಾರ ಹಾಗೂ ಇನ್ನಿತರ ಪರಿಶಿಷ್ಟ ಜಾತಿಗಳ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ, ಹಳೆಯ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿ ನಡೆಸಲು ಒತ್ತಾಯಿಸಿ ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ, ಚರ್ಮಗಾರ, ಸೂಕ್ಷ್ಮಜಾತಿಗಳ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ತಾಲೂಕು ಅಧ್ಯಕ್ಷ ಆರ್.ಮಹಲಿಂಗಯ್ಯ ಮಾತನಾಡಿ ಹಳೆಯ ಮೀಸಲಾತಿಯ, ಶೇ.50 ರ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯನ್ನು ಮುಂದುವರೆಸಿರುವುದಾಗಿ ಸರ್ಕಾರ ಹೇಳಿರುವುದು ಸ್ವಾಗತಾರ್ಹ. ಅದರಂತೆ ಕೂಡಲೇ ಸರ್ಕಾರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಎಸ್ಸಿ, ಎಸ್ಟಿಗಳ ಮೀಸಲಾತಿ ಹೆಚ್ಚಳ ಕುರಿತಂತೆ ಕೇಂದ್ರದ ಮೇಲೆ ಒತ್ತಡ ತರಲು ನಿಯೋಗ ಹೊರಡಬೇಕು. ಜನಗಣತಿ ದತ್ತಾಂಶ ಬರುವವರೆಗೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಬಾರದು. ಒಳ ಮೀಸಲಾತಿ ಹಂಚಿಕೆ ಪ್ರಕ್ರಿಯೆ ನಡೆಸುವ ಮುನ್ನ ನಮ್ಮ ಸಮುದಾಯದ ಮುಖಂಡರ ಜೊತೆಗೆ ಸಮಾಲೋಚನೆ ನಡೆಸಬೇಕು. ಉದ್ಯೋಗ ನೇಮಕಾತಿ ಕುರಿತು ರೋಸ್ಟರ್ ಹಂಚಿಕೆ ಮಾಡಿ ಸರ್ಕಾರ ಹೊರಡಿಸಿರುವ ಎಲ್ಲಾ ಆದೇಶ, ಸುತ್ತೋಲೆಗಳನ್ನು ಹಿಂಪಡೆಯಬೇಕು. ಈಗಾಗಲೇ ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳನ್ನು ರದ್ದುಗೊಳಿಸಬೇಕು. ಹಳೆಯ ಜಾತಿ ಪ್ರಮಾಣ ಪತ್ರವನ್ನೇ ಮುಂದವರೆಸಬೇಕು ಎಂದು ಆರ್.ಮಹಲಿಂಗಯ್ಯ ಹೇಳಿದರು. ಪರಿಶಿಷ್ಠರಿಗೆ ಮೀಸಲಾಗಿರುವ ಎಸ್ ಸಿ ಪಿ ಮತ್ತು ಟಿಎಸ್ ಪಿ ಅನುದಾನವನ್ನು ಬೇರೆಡೆಗೆ ಹಾಕದಂತೆ ಕಾನೂನು ತಿದ್ದುಪಡಿ ಮಾಡಬೇಕು. ನ್ಯಾ.ನಾಗಮೋಹನ್ ದಾಸ್ ಆಯೋಗದ ಸಮೀಕ್ಷಾ ಸಮಗ್ರ ದತ್ತಾಂಶ ಮಾಹಿತಿಯನ್ನು ತಾಲೂಕುವಾರು ಬಿಡುಗಡೆಗೊಳಿಸಬೇಕೆಂದು ಆರ್.ಮಹಲಿಂಗಯ್ಯ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಗೌರವಾಧ್ಯಕ್ಷರಾದ ಶಿವಲಿಂಗಯ್ಯ, ಕೆ.ಟಿ.ಬಸವರಾಜು, ಉಪಾಧ್ಯಕ್ಷ ತಿರುಮಲಯ್ಯ,ಬಂಡೆ ರಾಜಣ್ಣ, ಮುಖಂಡರಾದ ಅರೇಮಲ್ಲೇನಹಳ್ಳಿ ಸುರೇಶ್, ಮಂಜುನಾಥ್, ಕೆಂಪಣ್ಣ, ನಾಗಪ್ಪ, ಲಕ್ಷ್ಮೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.