ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಒಟ್ಟು 13 ಸದಸ್ಯರ ಸಂಖ್ಯಾಬಲ ಹೊಂದಿರುವ ಪಂಚಾಯ್ತಿಯಲ್ಲಿ ಸಭೆ ನಡೆಸಲು 7 ಮಂದಿ ಸದಸ್ಯರ ಹಾಜರಿ ಅವಶ್ಯಕತೆ ಇದ್ದು, ಗುರುವಾರ ನಡೆದ ಸಭೆಗೆ ಓರ್ವ ಸದಸ್ಯರ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಅಧ್ಯಕ್ಷ ರಾಮನಂಜಯ್ಯ ಕೋರಂ ಇಲ್ಲದೆ ಸಭೆಯನ್ನು ರದ್ದುಗೊಳಿಸಿದರು.
ಅಧ್ಯಕ್ಷ ರಾಮನಂಜಯ್ಯ ಅವರ ಮೇಲೆ ಸದಸ್ಯರಿಗೆ ವಿಶ್ವಾಸವಿಲ್ಲದೆ ಇಂದಿನ ಸಭೆಗೆ ಸದಸ್ಯರು ಗೈರಾಗಲು ಕಾರಣವೆನ್ನಲಾಗಿದೆ.ಸಭೆಗೆ ಅಧ್ಯಕ್ಷ ರಾಮನಂಜಯ್ಯ, ಸದಸ್ಯರಾದ ಬಸವರಾಜು, ರತ್ನಮ್ಮ, ಸರಸ್ವತಮ್ಮ, ಪದ್ಮ ಹಾಗು ಅನಿತಾ ಪಾಲ್ಗೊಂಡಿದ್ದರೆ, ಉಪಾಧ್ಯಕ್ಷೆ ಉಮಾ, ಮಾಜಿ ಉಪಾಧ್ಯಕ್ಷ ಸತೀಶ್, ಚಂದ್ರಶೇಖರ್ (ಗುಂಡ), ಶೇಖರ್, ಸದಸ್ಯರಾದ ಕಂಬಯ್ಯ, ಸುಲೋಚನಾ, ಮಣಿಯಮ್ಮ ಗೈರಾಗುವ ಮೂಲಕ ಅಧ್ಯಕ್ಷರ ಮೇಲೆ ತಮಗೆ ವಿಶ್ವಾಸವಿಲ್ಲ ಎಂಬ ಸಂದೇಶ ರವಾನಿಸಿದರು.
ಆಂತರಿಕ ಒಪ್ಪಂದ ಮುರಿದ ರಾಮನಂಜಯ್ಯ:
ಮಾಜಿ ಉಪಾಧ್ಯಕ್ಷ ಶೇಖರ್ ಮಾತನಾಡಿ, ಅಧ್ಯಕ್ಷ ರಾಮನಂಜಯ್ಯ ಅವರಿಗೆ ಅಧಿಕಾರದ ದುರಾಸೆ ಹೆಚ್ಚಾಗಿದೆ. ಹಾಗಾಗಿ ಚುನಾವಣಾ ಪೂರ್ವದಲ್ಲಿ ನಡೆದ ಆಂತರಿಕ ಒಪ್ಪಂದವನ್ನು ಮುರಿದು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ ಎಂದು ಆರೋಪಿಸಿದರು.ಸದಸ್ಯರೊಬ್ಬರ ಹೈಜಾಕ್....!
ಅಂತೆಯೇ ಸದಸ್ಯರೊಬ್ಬರನ್ನು ಹೈಜಾಕ್ ಮಾಡಿದ ಕುತೂಹಲಕಾರಿ ಘಟನೆ ಕೂಡ ನಡೆಯಿತು. ಸಭೆ ನಡೆಸಲು 7 ಸದಸ್ಯರ ಬಲಬೇಕಿತ್ತು. ಒಬ್ಬರು ಸದಸ್ಯರ ಕೊರತೆ ಎದುರಾಗಿತ್ತು. ಆಗ ಕಣ್ಣಿಗೆ ಬಿದ್ದದ್ದು ಗ್ರಾಮದ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಸದಸ್ಯ ಸತೀಶ್.