ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಲಿನ್ಯ ನಿಯಂತ್ರಣ ಸಂಸ್ಥೆಯಿಂದಲೇ ಪ್ರಕಟವಾದ ವರದಿಯಲ್ಲಿ ತುಂಗಾ, ಭದ್ರಾ ನದಿ ನೀರಿನಲ್ಲಿ ಅಲ್ಯೂಮಿನಿಯಂ ಅಂಶ ಹೇರಳವಾಗಿದ್ದು, ಸಾರ್ವಜನಿಕರಲ್ಲಿ ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ ಎಂದರು.
ಕೊಪ್ಪಳದ ಉಳೇನೂರಿನಲ್ಲಿ ಇಕೋಲೈ ಅಂಶ ಕಂಡು ಬಂದಿದ್ದು, ಜಾನುವಾರುಗಳು ಇದನ್ನು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಆಘಾತಕಾರಿಯಾಗಿದೆ. ನೀರಿನಲ್ಲಿ ಆಕ್ಸಿಜನ್ ಕೊರತೆಯು ಹೆಚ್ಚಿದೆ. ಕೃಷಿ, ಜನವಸತಿ, ಕೈಗಾರಿಕೆ, ಸುಧಾರಣೆಯಾಗದಿದ್ದರೆ ನಾವು ನದಿಯನ್ನು ಕಳೆದುಕೊಳ್ಳುತ್ತೇವೆ. ಮುಂದೊಂದು ದಿನ ಈ ನದಿ ಬೆಂಗಳೂರಿನ ವೃಷಭಾವತಿ ನದಿಯಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದರು.ಅಲ್ಲದೆ ಮುಂದಿನ ದಿನಗಳಲ್ಲಿ ಪ್ರತೀ ತಾಲೂಕಿನಲ್ಲೂ ಜಲಜಾಗೃತಿ ಸಮಿತಿ ರಚಿಸಿ, ಅವುಗಳಿಗೆ ತಾಂತ್ರಿಕ ಸಹಾಯ ನೀಡಲು ಯೋಜನೆ ರೂಪಿಸಿದ್ದೇವೆ ಎಂದರು.
ಪರ್ಯಾವರಣ ಟ್ರಸ್ಟ್ ಶಿವಮೊಗ್ಗ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ ಇವರ ಸಹಯೋಗದಲ್ಲಿ ಇತ್ತೀಚೆಗೆ ಚಿಕ್ಕಮಗಳೂರಿನ ಶೃಂಗೇರಿಯಿಂದ ಕೊಪ್ಪಳದ ಕಿಷ್ಕಿಂದೆ (ಗಂಗಾವತಿ)ವರೆಗೆ 430 ಕಿ.ಮೀ. ಉದ್ದದ ತುಂಗಭದ್ರಾ ನದಿ ನೀರಿನ ಸ್ವಚ್ಛತೆ ಬಗ್ಗೆ ಜನಜಾಗೃತಿ-ಜಲಜಾಗೃತಿ ಕುರಿತು ಬೃಹತ್ ನಿರ್ಮಲ ತುಂಗಾ ಅಭಿಯಾನ, ಕರ್ನಾಟಕದಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಆ ಸಂದರ್ಭದಲ್ಲಿ ಕಂಡುಬಂದ ಸಮಸ್ಯೆ, ಸಾರ್ವಜನಿಕರಿಂದ ಬಂದ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಸಿದ್ಧಪಡಿಸಿದ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದರು.
ಶೃಂಗೇರಿಯಿಂದ ಹರಿಹರದವರೆಗಿನ ಪ್ರದೇಶ ಕೃಷಿ ಪ್ರಧಾನವಾಗಿದ್ದು, ಇಲ್ಲಿ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಶಕ ಇತ್ಯಾದಿಗಳು ನೇರವಾಗಿ ನದಿಯನ್ನು ಸೇರುತ್ತಿವೆ. ಹರಿಹರದಿಂದ ಗಂಗಾವತಿವರೆಗಿನ ಪ್ರದೇಶಗಳಲ್ಲಿ ನದಿ ತಟದಲ್ಲಿರುವ ಆದಿತ್ಯ ಬಿರ್ಲಾದಂತಹ ಬೃಹತ್ ಕೈಗಾರಿಕೆಗಳ ತ್ಯಾಜ್ಯ ನದಿಯನ್ನು ಸೇರಿ, ಸಂಪೂರ್ಣ ಕಲುಷಿತಗೊಳಿಸಿವೆ. ಇದರಿಂದ ನದಿ ನೀರು ಬಾಹ್ಯ ಉಪಯೋಗಕ್ಕೂ ಬಾರದು ಎಂದು ವೈಜ್ಞಾನಿಕ ಸಂಶೋಧನಾ ವರದಿ ತಿಳಿಸಿದೆ ಎಂದರಲ್ಲದೆ, ವರದಿಯಲ್ಲಿನ ಅನೇಕ ಅಂಶಗಳು ಜೀವರಾಶಿಗಳು ಹಾಗೂ ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಸರ್ಕಾರ ಶೀಘ್ರ ಗಮನಹರಿಸಬೇಕಾಗಿದೆ ಎಂದು ಒತ್ತಾಯಿಸಿದರು.
-----------------
ಈ ಪಾದಯಾತ್ರೆಯಲ್ಲಿ ಸುಮಾರು 35 ಸಣ್ಣ, 15ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಆಯೋಜಿಸಿ, ಜನರಲ್ಲಿ ಜಲಜಾಗೃತಿವುಂಟುಮಾಡುವ ಜೊತೆಗೆ ನದಿ ಸಂರಕ್ಷಣೆ ಕಾರ್ಯದ ಬಗ್ಗೆ ಸರ್ಕಾರದ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದ ಅವರು, ಈ ಪಾದಯಾತ್ರೆಯಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು 250 ಪರಿಸರ ಕಾಳಜಿ ಸಂಘ-ಸಂಸ್ಥೆಗಳು, 30 ಧಾರ್ಮಿಕ ಮಠ-ಮಂದಿರಗಳು, ರೈತರು, ಸಾಧುಸಂತರು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ ಎಂದರು.