ರಾಮಮೂರ್ತಿ ನವಲಿ
ಗಂಗಾವತಿ: ಗಂಗಾ ಸ್ನಾನ, ತುಂಗಾ ಪಾನ ಎನ್ನುವ ಮಾತಿದೆ. ತುಂಗೆಯ ನೀರು ಅಷ್ಟು ಶ್ರೇಷ್ಠ, ಶುದ್ಧ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕೆಗಳ ತ್ಯಾಜ್ಯದಿಂದ ನದಿ ನೀರು ಕಲುಷಿತವಾಗಿದೆ.ಇಂತಹ ಪುಣ್ಯನದಿಯ ಪಾವಿತ್ರ್ಯ ಉಳಿಸಲು "ನಿರ್ಮಲ ತುಂಗಾ–ಭದ್ರಾ ಅಭಿಯಾನ "ದ ತಂಡ ಶೃಂಗೇರಿಯಿಂದ ಗಂಗಾವತಿ ತಾಲೂಕಿನ ಕಿಷ್ಕಿಂಧೆ ವರೆಗೆ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದೆ.
ಈಗಾಗಲೇ 2 ಹಂತಗಳ ನಿರ್ಮಲ ತುಂಗಾ-ಭದ್ರಾ ಅಭಿಯಾನ 7 ಜಿಲ್ಲೆ, 13 ತಾಲೂಕು, 120 ಗ್ರಾಮಗಳ ಮೂಲಕ 430 ಕಿಮೀ ಪಾದಯಾತ್ರೆ ಸಾಗಿದೆ. 50 ಸಭೆಗಳು ನಡೆದಿವೆ. 150 ಶಾಲಾ-ಕಾಲೇಜು, 250 ಪರಿಸರ ಕಾಳಜಿ ಸಂಸ್ಥೆ, ಮಠಗಳು ಬೆಂಬಲಿಸಿ, ಅಭಿಯಾನದಲ್ಲಿ ಪಾಲ್ಗೊಂಡಿವೆ.ಶುದ್ಧೀಕರಣ ಮಾಡುತ್ತಿಲ್ಲ: ನದಿಯ ನೀರು ಈಗ ಕಲುಷಿತವಾಗಿದೆ. ನದಿ ತೀರದಲ್ಲಿ ಹಲವು ಚಟುವಟಿಕೆ ನಡೆಯುತ್ತಿದ್ದು, ಯಾರೂ ನೀರು ಶುದ್ಧೀಕರಿಸಿ ನದಿಗೆ ಬಿಡುತ್ತಿಲ್ಲ. ಶೃಂಗೇರಿಯಿಂದ ಕಿಷ್ಕಿಂಧಾ ವರೆಗೆ ಫ್ಯಾಕ್ಟರಿ ನೀರು, ರೆಸಾರ್ಟ್‌ಗಳ ತ್ಯಾಜ್ಯ, ಕಸಾಯಿಖಾನೆ ತ್ಯಾಜ್ಯ, ಕೃಷಿ ಚಟುವಟಿಕೆಯಲ್ಲಿ ರಾಸಾಯನಿಕ ಸಿಂಪರಣೆ ನೀರು, ಮೈನಿಂಗ್ ನೀರು ನದಿಗೆ ನೇರವಾಗಿ ಸೇರುತ್ತಿದೆ. ನೀರು ಕುಡಿಯಲು ಯೋಗ್ಯವಾಗದ ಸ್ಥಿತಿಗೆ ತಲುಪಿದೆ. ಸಾಕಷ್ಟು ಜನರು ನದಿ ನೀರು ಕುಡಿದು ಅನಾರೋಗ್ಯಕ್ಕೆ ಈಡಾದ ಉದಾಹರಣೆಗಳಿವೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಖಾಸಗಿ ಪ್ರಯೋಗಾಲಯದಲ್ಲಿ ನದಿ ನೀರು ಪರೀಕ್ಷೆ ಮಾಡಲಾಗಿದೆ. ಪ್ರತಿ ಲೀಟರ್ ಕುಡಿಯುವ ನೀರಿನಲ್ಲಿ ಇರಬೇಕಾದ ಅಲ್ಯುಮಿನಿಯಂ ಪ್ರಮಾಣಕ್ಕಿಂತ 2ರಿಂದ 3 ಪಟ್ಟು ಹೆಚ್ಚಿದೆ. ನಿಖರವಾಗಿ ಪ್ರತಿ ಲೀಟರ್ ಕುಡಿಯುವ ನೀರಿನಲ್ಲಿ 0.2 ರಿಂದ 0.3 ಮಿಲಿ ಗ್ರಾಂ ಅಲ್ಯುಮಿನಿಯಂ ಇರಬೇಕು.ಪರಿಹಾರ: ತುಂಗಭದ್ರಾ ಜಲಾಶಯದ ಹೂಳು ತೆಗೆಯುವುದು ಪ್ರಮುಖ ವಿಷಯವಾಗಿದೆ. ವಿಜಯನಗರ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಣ್ಣ ಅತಿ ಸಣ್ಣ ಬೃಹತ್ ಕೈಗಾರಿಕೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕಾಗಿದೆ. ನದಿ ತೀರದಲ್ಲಿ ತಲೆ ಎತ್ತಿರುವ ರೆಸಾರ್ಟ್‌ಗಳನ್ನು ತೆರುವುಗೊಳಿಸಬೇಕಾಗಿದೆ. ನದಿ ತೀರದ ಗ್ರಾಮಗಳಲ್ಲಿ ಆರೋಗ್ಯ ಚಿಕಿತ್ಸೆ ಕೇಂದ್ರಗಳ ಸ್ಥಾಪನೆ, ಪುಣ್ಯಕ್ಷೇತ್ರಗಳಲ್ಲಿ ಬರುವ ಭಕ್ತರು ನದಿ ಸ್ನಾನ ಸಂದರ್ಭದಲ್ಲಿ ಸೋಪು, ಶ್ಯಾಂಪು ಬಳಕೆ ಮತ್ತು ಮಡಿ ವಸ್ತ್ರಗಳನ್ನು ನದಿಯಲ್ಲಿ ಎಸೆಯುವುದನ್ನು ನಿಲ್ಲಿಸಬೇಕು.
ಗಂಗಾವತಿ ನಗರದ ದುರಗಮ್ಮ ಹಳ್ಳ ಮತ್ತು ಹೊಸಪೇಟೆಯಲ್ಲಿ ಹರಿಯುವ ರಾಯ ಕಾಲುವೆಗಳ ಜೀರ್ಣೋದ್ಧಾರ ಆಗಬೇಕು ಎಂಬ ವಿಷಯ ಸೇರಿದಂತೆ ಹತ್ತು ಹಲವಾರು ಬೇಡಿಕೆಗಳು ಈಡೇರಿದರೆ ಮಾತ್ರ ತುಂಗಾ ಪಾನ ಎನ್ನುವುದಕ್ಕೆ ಮೌಲ್ಯ ಬರುತ್ತದೆ.ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ನಿರ್ಮಲ ತುಂಗಾ–ಭದ್ರಾ ಅಭಿಯಾನದ ತಂಡ ಪ್ರಯತ್ನ ಕೈಗೊಂಡಿದೆ. ಇದಕ್ಕೆ ರೈತರು, ಪರಿಸರಪ್ರೇಮಿಗಳು, ಸಂಘ-ಸಂಸ್ಥೆಗಳು ಬೆಂಬಲಿಸಬೇಕಿದೆ.ಶೃಂಗೇರಿಯಿಂದ ಗಂಗಾವತಿ ತಾಲೂಕಿನ ಕಿಷ್ಕಿಂಧೆ ವರಿಗೆ ಪಾದಯಾತ್ರೆ ಮೂಲಕ ಜನ ಜಾಗೃತಿ ಪೂರ್ಣ ಗೊಂಡಿದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಕಿಷ್ಕಿಂಧೆಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ ನಡೆಸಿ ಅಭಿಯಾನ ಮುಕ್ತಾಯಗೊಳಿಸಲಾಗುತ್ತದೆ. ಆನಂತರ ಸಮಗ್ರ ವರದಿಯನ್ನು ಬೆಂಗಳೂರಲ್ಲಿ ಬಿಡುಗಡೆ ಮಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಸಲ್ಲಿಸಲಾಗುತ್ತದೆ ಎಂದು ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಕುಮಾರಸ್ವಾಮಿ ಹೇಳಿದರು.