ಇನ್ನೆರಡು ದಿನದಲ್ಲಿ ತುಂಗಭದ್ರಾ ಜಲಾಶಯ ಭರ್ತಿ ? ಸಿಎಂ ಸಿದ್ದರಾಮಯ್ಯ ಬಾಗಿನ ಸಾಧ್ಯತೆ

KannadaprabhaNewsNetwork |  
Published : Sep 03, 2024, 01:43 AM ISTUpdated : Sep 03, 2024, 12:45 PM IST
2ಕೆಪಿಎಲ್27 ಬಹುತೇಕ ಭರ್ತಿಯಾಗಿರುವ ತುಂಗಭದ್ರಾ ಜಲಾಶಯ  | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಗರಿಷ್ಠ 1633 ಅಡಿಗೆ ಪ್ರತಿಯಾಗಿ 1631.22 ಅಡಿ ಭರ್ತಿಯಾಗಿದೆ.

 ಸೋಮರಡ್ಡಿ ಅಳವಂಡಿ

 ಕೊಪ್ಪಳ :  ತುಂಗಭದ್ರಾ ಜಲಾಶಯದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಗರಿಷ್ಠ 1633 ಅಡಿಗೆ ಪ್ರತಿಯಾಗಿ 1631.22 ಅಡಿ ಭರ್ತಿಯಾಗಿದೆ. ಜಲಾಶಯದ ಸಂಗ್ರಹಣಾ ಸಾಮರ್ಥ್ಯ 105.885 ಟಿಎಂಸಿ ಇದ್ದು, 99 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಅಧಿಕಾರಿಗಳ ಮಾಹಿತಿಯ ಪ್ರಕಾರ ಇನ್ನೆರಡು ದಿನದಲ್ಲಿ ಪೂರ್ಣ ಭರ್ತಿಯಾಗಲಿದೆ.

ಆ. 10ರಂದು ಜಲಾಶಯದ ಕ್ರಸ್ಟ್ ಗೇಟ್ ನಂಬರ್ 19 ಕಿತ್ತು ಹೋದ ಮೇಲೆ ಅದನ್ನು ವಾರಗಳ ಕಾಲ ಹಗಲು-ರಾತ್ರಿ ಪ್ರಯತ್ನ ಮಾಡಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಸಲಾಯಿತು. ನೀರು ಪೋಲಾಗುತ್ತಿರುವುದನ್ನು ತಡೆಯುವ ಮೂಲಕ ದೊಡ್ಡ ಗಂಡಾಂತರ ತಪ್ಪಿಸಲಾಯಿತು.

ಎಂಜಿನಿಯರ್ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಅನೇಕ ಎಂಜಿನಿಯರ್‌ಗಳು, ನೂರಾರು ಕಾರ್ಮಿಕರು ಪ್ರಾಣದ ಹಂಗು ತೊರೆದು ದುರಸ್ತಿ ಮಾಡಿದರು.

40 ಟಿಎಂಸಿ ಪೋಲು:

ವಾರದಲ್ಲಿಯೇ ಸುಮಾರು 40 ಟಿಎಂಸಿ ನೀರು ಪೋಲಾಗಿದೆ. 105 ಟಿಎಂಸಿ ಇದ್ದ ಜಲಾಶಯದಲ್ಲಿ ನೀರು ಪೋಲಾಗಿ 68 ಟಿಎಂಸಿಗೆ ಇಳಿಯುವಂತೆ ಆಯಿತು. ಒಳ ಹರಿವು ಇದ್ದಾಗ ನೀರು ಹರಿದು ಹೋಗಿದ್ದರಿಂದ 40 ಟಿಎಂಸಿಗೂ ಹೆಚ್ಚು ನೀರು ಪೋಲಾಗಿದೆ.

ಈಗ ಪುನಃ ಜಲಾಶಯ ಸಂಪೂರ್ಣ ಭರ್ತಿಯಾಗುತ್ತಿದೆ. ಒಂದು ಅಡಿ ಮಾತ್ರ ಬಾಕಿ ಇದ್ದು, ಇನ್ನೊಂದು ದಿನದಲ್ಲಿಯೇ ಭರ್ತಿಯಾಗಲಿದೆ ಎನ್ನಲಾಗುತ್ತಿದೆ.

ಸಿಎಂ ಬರೋದು ಯಾವಾಗ:

ಸಿಎಂ ಸಿದ್ದರಾಮಯ್ಯ ಆ. 10ರಂದು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕಾರಣಾಂತರದಿಂದ ಮುಂದೂಡಿಕೆಯಾಗಿತ್ತು. ಆದರೆ, ಅಂದೇ ರಾತ್ರಿ 19ನೇ ಕ್ರಸ್ಟ್ ಗೇಟ್ ಕಿತ್ತು ಹೋಯಿತು.

ಹೀಗಾಗಿ, ಬಾಗಿನ ಅರ್ಪಿಸುವುದಕ್ಕೆ ಬರಬೇಕಾಗಿದ್ದ ಸಿಎಂ ಸಿದ್ದರಾಮಯ್ಯ ಕ್ರಸ್ಟ್ ಗೇಟ್‌ ಮುರಿದು ಹೋಗಿದ್ದರ ದುರಸ್ತಿ ಕಾರ್ಯ ಪರಿಶೀಲನೆಗೆ ಬರುವಂತೆ ಆಯಿತು.

ಆಗ ಕ್ರಸ್ಟ್ ಗೇಟ್ ದುರಸ್ತಿ ಕಾರ್ಯ ಯಶಸ್ವಿಯಾಗಿ ಮುಗಿಯುತ್ತದೆ. ಮತ್ತೆ ಮಳೆ ಬಂದೇ ಬರುತ್ತದೆ, ಜಲಾಶಯ ಭರ್ತಿಯಾಗುತ್ತದೆ. ನಾನು ಬಂದು ಬಾಗಿನ ಅರ್ಪಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಮೊದಲ ಬಾರಿ:

ತುಂಗಭದ್ರಾ ಜಲಾಶಯ ನಿರ್ಮಾಣ ಮಾಡಿ 70 ವರ್ಷವಾಗಿದ್ದರೂ ಸಹ ಇದುವರೆಗೂ ಯಾವೊಬ್ಬ ಸಿಎಂ ಬಂದು ಬಾಗಿನ ಅರ್ಪಣೆ ಮಾಡಿಲ್ಲ. ಇದೇ ಮೊದಲ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ ಮಾಡಲು ಮುಂದಾಗಿದ್ದರು. ಈಗ ಬರುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.

ರಾಜ್ಯೋತ್ಸವ ಪ್ರಶಸ್ತಿ ಕೂಗು:

ತುಂಗಭದ್ರಾ ಜಲಾಶಯದ ಮುರಿದ 19ನೇ ಕ್ರಸ್ಟ್ ಗೇಟ್ ದುರಸ್ತಿ ಮಾಡಲು ಶತಾಯಗತಾಯ ಶ್ರಮಿಸಿದ ಎಂಜಿನಿಯರ್ ಕನ್ನಯ್ಯ ನಾಯ್ಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎನ್ನುವ ಕೂಗು ಕೇಳಿಬರಲಾರಂಭಿಸಿದೆ.

ಗೇಟ್ ದುರಸ್ತಿಯಾದ ಮೇಲೆ ಕನ್ನಯ್ಯ ನಾಯ್ಡು ಅವರೊಂದಿಗೆ ಊಟ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಈ ಕೂಗಿಗೆ ರಾಜ್ಯ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನೂ ಕಾದು ನೋಡಬೇಕಾಗಿದೆ.

ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿರುವುದರಿಂದ ಈ ಬಾರಿ ಎರಡನೇ ಬೆಳೆಯ ಭರವಸೆ ಮೂಡಿದೆ.

ಒಳಹರಿವು ಇನ್ನೂ ಹೆಚ್ಚುತ್ತಲೇ ಇರುವುದರಿಂದ, ಒಳಹರಿವು ಬಳಕೆ ಮಾಡಿಕೊಂಡರೆ ಜಲಾಶಯದಲ್ಲಿನ ನೀರು ಹಾಗೆ ಸಂಗ್ರಹವಾಗಿಯೇ ಇರುತ್ತದೆ. ಹೀಗೆ ಆದರೆ, ಎರಡನೇ ಬೆಳೆಗೂ ನೀರಿನ ಸಮಸ್ಯೆಯೇ ಆಗುವುದಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ