ನಗರ ವಾಹನ ದಟ್ಟಣೆ ತಗ್ಗಿಸಲು ಟನಲ್‌ ರಸ್ತೆ ಅಗತ್ಯ

KannadaprabhaNewsNetwork |  
Published : Nov 12, 2025, 04:45 AM IST
Tunnel (1) | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಸುರಂಗ ರಸ್ತೆ ಉತ್ತರವಾಗಿದೆ ಎಂದು ದಿ ಇನ್ಸ್‌ಟಿಟ್ಯೂಟ್ ಆಫ್‌ ಎಂಜಿನಿಯರ್ಸ್‌ ವರದಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಲಿಕಾನ್‌ ಸಿಟಿ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡುವುದಕ್ಕೆ ಟನಲ್‌ ರಸ್ತೆ ನಿರ್ಮಾಣ ಅಗತ್ಯವಾಗಿದ್ದು, ತ್ವರಿತವಾಗಿ ಟನಲ್‌ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕೆಂದು ದಿ ಇನ್ಸ್‌ಟಿಟ್ಯೂಟ್ ಆಫ್‌ ಎಂಜಿನಿಯರ್ಸ್‌ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ.

ನಗರದ ಅಂಬೇಡ್ಕರ್‌ ವೀದಿಯ ಇನ್ಸ್‌ಟಿಟ್ಯೂಟ್ ಆಫ್‌ ಎಂಜಿನಿಯರ್ಸ್‌ನ ರಾಜ್ಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಉದ್ದೇಶಿತ ಬೆಂಗಳೂರಿನಲ್ಲಿ ಸುರಂಗ ಯೋಜನೆ ಕುರಿತ ಸಂವಾದದಲ್ಲಿ ಉಪನ್ಯಾನ ನೀಡಿದ ಇನ್ಸ್‌ಟಿಟ್ಯೂಟ್‌ನ ಕಾರ್ಯದರ್ಶಿ ಎಂ. ಲಕ್ಷ್ಮಣ್‌, ಬೆಂಗಳೂರು ಇಡೀ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ನಗರವಾಗಿದೆ. ಸುಗಮ ಸಂಚಾರ ಎಂಬುದು ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿದ್ದು, ಅದು ಮಾರಕವಲ್ಲ. ತಾಂತ್ರಿಕ ಅಂಶಗಳನ್ನು ಅಧ್ಯಯನ ನಡೆಸಿ ಟನಲ್‌ ಯೋಜನೆ ಅನುಷ್ಠಾನಕ್ಕೆ ಶಿಫಾರಸ್ಸು ವರದಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಸದ್ಯ ನಗರದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣ ಮಾಡುವುದಕ್ಕೆ ಭಾರೀ ಸಮಸ್ಯೆ ಆಗುತ್ತಿದೆ. ಟನಲ್‌ ರಸ್ತೆಯಿಂದ ಎಲ್ಲ ಸಂಚಾರ ದಟ್ಟಣೆ ಒಂದೇ ಬಾರಿಗೆ ನಿವಾರಣೆ ಸಾಧ್ಯವಿಲ್ಲ. ಆದರೆ, ಸ್ವಲ್ಪಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಎಲ್ಲ ಲಘು ವಾಹನ ಸಂಚಾರಕ್ಕೆ ಅವಕಾಶ

ಬೆಂಗಳೂರು ನಗರದಲ್ಲಿ 1.5 ಕೋಟಿ ಜನ ವಾಸಿಸುತ್ತಿದ್ದು, 60 ಲಕ್ಷ ಮಂದಿ ಪ್ರತಿ ದಿನ ಬಂದು ಹೋಗುತ್ತಾರೆ. 1.5 ಕೋಟಿ ವಾಹನವಿದ್ದು, ಪ್ರತಿ ದಿನ 50 ಲಕ್ಷ ವಾಹನ ಬಂದು ಹೋಗುತ್ತಿವೆ. ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ 3500 ವಾಹನ ನೋಂದಣಿ ಆಗುತ್ತಿವೆ. ಈ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಆ ಯಾವುದನ್ನೂ ತಡೆಗಟ್ಟುವುದಕ್ಕೆ ಸಾಧ್ಯವಿಲ್ಲ. ಜತೆಗೆ ಟನಲ್‌ ರಸ್ತೆಯಲ್ಲಿ ಕಾರು ಸಂಚಾರಕ್ಕೆ ಮಾತ್ರ ಅವಕಾಶ ಎಂದು ಸುಳ್ಳು ವದಂತಿ ಹಬ್ಬಿಸಲಾಗಿದ್ದು, ಕಾರು ಮಾತ್ರವಲ್ಲ ಎಲ್ಲಾ ಲಘು ವಾಹನ ಸಂಚಾರಕ್ಕೆ ಅವಕಾಶವಿರಲಿದೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ದಿ ಇನ್ಸ್‌ಟಿಟ್ಯೂಟ್ ಆಫ್‌ ಎಂಜಿನಿಯರ್ಸ್‌ ಸಂಸ್ಥೆಯ ಡಾ.ರಂಗರೆಡ್ಡಿ, ಡಾ.ಎನ್.ಚಿಕ್ಕಣ್ಣ ಮೊದಲಾದವರಿದ್ದರು.

--------ಫೋಟೋ...

ಸುರಂಗ ಯೋಜನೆ ಕುರಿತ ಸಂವಾದದಲ್ಲಿ ಇನ್ಸ್‌ಟಿಟ್ಯೂಟ್ ಆಫ್‌ ಎಂಜಿನಿಯರ್ಸ್‌ ಕಾರ್ಯದರ್ಶಿ ಎಂ. ಲಕ್ಷ್ಮಣ್‌, ಸಂಸ್ಥೆಯ ಡಾ.ರಂಗರೆಡ್ಡಿ, ಡಾ.ಎನ್.ಚಿಕ್ಕಣ್ಣ ಇದ್ದರು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ