ಈ ಗ್ರಾಮಗಳ ಜಲಾನಯನ ಪ್ರದೇಶಗಳಲ್ಲಿ ಸುಮಾರು 550ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಗಳಲ್ಲಿ ರೈತಾಪಿಗಳು ಭತ್ತದ ಬೆಳೆ ಬೆಳೆಯಲು ಸನ್ನದ್ಧರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯುತ್ತಿರುವ ರೈತರಿಗೆ ಕೂಡಲೇ ನ್ಯಾಯ ಒದಗಿಸಬೇಕು ಎಂದು ತಾಲೂಕಿನ ಅರಳೀಕೆರೆ, ಮಾದಿಹಳ್ಳಿ, ಮಾದಿಹಳ್ಳಿ ಪಾಳ್ಯ, ಅರಿಶಿನದಹಳ್ಳಿ, ಸುಂಕಲಾಪುರ, ಆನೇಮೆಳೆ, ದ್ವಾರನಹಳ್ಳಿ ಗ್ರಾಮದ ನೂರಾರು ರೈತರು ಹೇಮಾವತಿ ನೀರಾವರಿ ವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಈ ಗ್ರಾಮಗಳ ಜಲಾನಯನ ಪ್ರದೇಶಗಳಲ್ಲಿ ಸುಮಾರು 550ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಗಳಲ್ಲಿ ರೈತಾಪಿಗಳು ಭತ್ತದ ಬೆಳೆ ಬೆಳೆಯಲು ಸನ್ನದ್ಧರಾಗಿದ್ದಾರೆ. ಹೇಮಾವತಿ ಅಧಿಕಾರಿಗಳು ಈ ಬೆಳೆಗಳಿಗೆ ಕೇವಲ 60 ದಿನಗಳು ಮಾತ್ರ ನೀರು ಹರಿಸಲು ಮುಂದಾಗಿದ್ದಾರೆ. ಆದರೆ ಯಾವುದೇ ಭತ್ತದ ಬೆಳೆ ಬೆಳೆಯಲು ಕನಿಷ್ಠ 120 ದಿನಗಳು ಬೇಕು. ಆದರೆ ಅಧಿಕಾರಿಗಳು ಕೇವಲ 60 ದಿನ ಮಾತ್ರ ನೀರು ಹರಿಸಿದರೆ ಹೇಗೆ ಎಂದು ಒಕ್ಕಲಿಗರ ಸಂಘದ ನಿರ್ದೇಶಕ ಮಾದಿಹಳ್ಳಿ ಕಾಂತರಾಜ್ ಆಕ್ಷೇಪಿಸಿದರು.ಅಧಿಕಾರಿಗಳು ನೀಡಿರುವ ಸುತ್ತೋಲೆಯ ಪ್ರಕಾರ ಈಗಾಗಲೇ 20 ದಿನಗಳು ಕಳೆದಿವೆ. ಇನ್ನು ಕೇವಲ 40 ದಿನಗಳು ಮಾತ್ರ ಬಾಕಿ ಇವೆ. ಈ ಅವಧಿ ಮುಗಿದ ನಂತರ ನೀರು ಹರಿಸದಿದ್ದರೆ ಬೆಳೆಗಳು ಹಾಳಾಗುತ್ತವೆ ಎಂದು ಹೇಳಿದರು.ಕಳೆದ ಬಾರಿ ಅಧಿಕಾರಿಗಳ ತಾತ್ಸಾರ ಮನೋಭಾವದಿಂದಾಗಿ ಸುಮಾರು ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆಯಲಾಗಿದ್ದ ಭತ್ತದ ಬೆಳೆ ನೀರಿಲ್ಲದೇ ಒಣಗಿ ಹೋಯಿತು. ಆಗ ಪ್ರತಿ ರೈತರಿಗೆ ಕನಿಷ್ಠ ಒಂದು ಲಕ್ಷ ರು.ಗಳಷ್ಟು ನಷ್ಠ ಸಂಭವಿಸಿತು. ಅದೇ ಪ್ರಕಾರ ಈ ಬಾರಿಯೂ ಅಧಿಕಾರಿಗಳು ಮಾಡುವ ಸಾಧ್ಯತೆ ಇರುವುದರಿಂದ ರೈತಾಪಿಗಳು ಎಚ್ಚೆತ್ತು ಹೇಮಾವತಿ ಕಚೇರಿ ಮುಂದೆ ಪ್ರತಿಭಟನೆ ಮಾಡುವ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ನೀರು ಹರಿಸುವ ಸಂಬಂಧ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಮಾದಿಹಳ್ಳಿ ಕಾಂತರಾಜ್ ದೂರಿದರು.ನಿರ್ಲಕ್ಷ್ಯ:
ಹೇಮಾವತಿ ನಾಲಾ ಅಧಿಕಾರಿಗಳು ಕೆರೆಯ ಮೂಲಕ ಜಲಾನಯನ ಪ್ರದೇಶಗಳಿಗೆ ನೀರು ಹರಿಸುವ ಸಂಬಂಧ ಕರೆಯಲಾಗುವ ಸಭೆಗೆ ರೈತ ಪ್ರತಿನಿಧಿಗಳನ್ನು ಕರೆಯದೇ ನಿರ್ಲಕ್ಷ್ಯ ಮಾಡಿದ್ದಾರೆಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ಅರಳೀಕೆರೆ ಶಿವಯ್ಯ ಆಪಾದಿಸಿದರು.
ರೈತರು ಬೆಳೆಯುವ ಬೆಳೆಗೆ ಸೂಕ್ತ ಬೆಲೆಯೂ ಇಲ್ಲದಾಗಿದೆ. ಇತ್ತ ಸಮ ಪ್ರಮಾಣದಲ್ಲಿ ನೀರನ್ನೂ ಕೊಡಲಾಗದೇ ರೈತರನ್ನು ಸಂಕಷ್ಠಕ್ಕೆ ದೂಡಲಾಗುತ್ತಿದೆ. ಇಂತಹ ಸ್ಥಿತಿ ಮುಂದುವರೆದಲ್ಲಿ ರೈತರಿಗೆ ಆಗುವ ನಷ್ಠವನ್ನು ಸರ್ಕಾರವೇ ತುಂಬಿಕೊಡಬೇಕೆಂದು ಅರಳೀಕೆರೆ ಶಿವಯ್ಯ ಆಗ್ರಹಿಸಿದರು.ಭರವಸೆ:
ರೈತರ ಅಹವಾಲನ್ನು ಸ್ವಿಕರಿಸಿ ಮಾತನಾಡಿದ ಹೇಮಾವತಿ ನಾಲಾ ಇಲಾಖಾ ಕಾರ್ಯಪಾಲಕ ಇಂಜಿನಿಯರ್ ಬಿಂದಿ, ತಿಪಟೂರು ಉಪ ವಿಭಾಗಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.ಸೂಚನೆ:
ರೈತಾಪಿಗಳ ಬೆಳೆಗೆ ಅನುಕೂಲವಾಗುವಂತೆ ಹೇಮಾವತಿ ನೀರನ್ನು ಕಾಲುವೆಗಳ ಮೂಲಕ ಹರಿಸಲಾಗುತ್ತಿದೆ. ಅಂತಿಮ ಗುರಿಯವರೆಗೂ ನೀರು ಹರಿಸುವ ಉದ್ದೇಶವಿರುವ ಕಾರಣ ಮಾರ್ಗ ಮಧ್ಯದಲ್ಲಿ ಯಾರೂ ಸಹ ಕಾಲುವೆಗಳಿಗೆ ಪಂಪ್ ಸೆಟ್, ಅಥವಾ ಮೋಟಾರ್ ಪಂಪ್ ಗಳನ್ನು ಅಳವಡಿಸಿಕೊಂಡು ನೀರು ಹರಿಸಿಕೊಳ್ಳುವುದು ಅಪರಾಧವಾಗುತ್ತದೆ. ಇತ್ತೀಚೆಗೆ ಸರ್ಕಾರ ತಂದಿರುವ ತಿದ್ದುಪಡಿಯ ಅನ್ವಯ ಹಳೆಯ ನೀರಾವರಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದರ ಅನ್ವಯ ಹೇಮಾವತಿ ನಾಲಾ ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ಪವರ್ ಅನ್ನು ನೀಡಲಾಗಿದೆ. ಹೇಮಾವತಿ ನಾಲೆಗೆ ಯಾರೇ ಆಗಲಿ ಅಕ್ರಮವಾಗಿ ಪಂಪ್ ಸೆಟ್‌ಗಳನ್ನು ಅಳವಡಿಸಿಕೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯಪಾಲಕ ಇಂಜಿನಿಯರ್ ಬಿಂದಿ ಎಚ್ಚರಿಸಿದ್ದಾರೆ.ಪ್ರತಿಭಟನೆಯ ವೇಳೆ ಮುಖಂಡರಾದ ಎಂ.ವಿ.ಕುಮಾರ್, ಎಂ.ಆರ್.ನಂಜುಂಡಪ್ಪ, ಚಂದ್ರೇಗೌಡ, ಮುರುಳೀಧರ್, ಕೃಷ್ಣಪ್ಪ, ನಾಗಣ್ಣ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.20 ಟಿವಿಕೆ 1 – ತುರುವೇಕೆರೆಯ ಹೇಮಾವತಿ ಕಛೇರಿಯ ಮುಂಭಾಗ ರೈತಾಪಿಗಳು ಪ್ರತಿಭಟನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.