ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಳ್ಳಾರಿಯ ಶೂಟೌಟ್‌ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಶೀಘ್ರದಲ್ಲೇ ಬಳ್ಳಾರಿಯಲ್ಲೇ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನ ಕೈಗೊಂಡಿದೆ.

 ಬೆಂಗಳೂರು : ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಳ್ಳಾರಿಯ ಶೂಟೌಟ್‌ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಶೀಘ್ರದಲ್ಲೇ ಬಳ್ಳಾರಿಯಲ್ಲೇ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನ ಕೈಗೊಂಡಿದೆ.

ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ

ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ತಮ್ಮ ಪಕ್ಷದ ಮುಖಂಡರ ಮೇಲೆ ದಬ್ಬಾಳಿಕೆ ನಡೆಸಲು ಮುಂದಾಗಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸಮಾವೇಶದ ಮೂಲಕ ತಿರುಗೇಟು ನೀಡಬೇಕು. ಈ ಸಂಬಂಧ ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಚಲಿತ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೋರ್ ಕಮಿಟಿ ಸದಸ್ಯರೂ ಆಗಿರುವ ಮಾಜಿ ಸಚಿವ ಸಿ.ಟಿ.ರವಿ, ಸಭೆಯಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದೇವೆ. ನಮ್ಮ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಹತ್ಯೆ ಆಗಿದೆ. ಹಿಂಸೆ ನಡೆಸುವ ಉದ್ದೇಶದಿಂದ ಮಾರಕ ಆಯುಧದ ಜೊತೆ ಜನಾರ್ದನ ರೆಡ್ಡಿ ಅವರ ಮನೆಯನ್ನು ಗುರಿಯಾಗಿ ಇಟ್ಟುಕೊಂಡು ಗಲಭೆ ಮಾಡಲಾಗಿದೆ ಎಂದು ಆರೋಪಿಸಿದರು.

ಬಳ್ಳಾರಿಯ ಈ ಗಲಭೆ ಬಿಹಾರ ರಾಜ್ಯವನ್ನು ನೆನಪಿಗೆ ತಂದಿತು. ಆದರೆ ಬಿಹಾರದಲ್ಲಿ ಗಲಭೆ ನಿಯಂತ್ರಣಕ್ಕೆ ಬಂದಿದೆ. ಈ ಬಳ್ಳಾರಿ ಘಟನೆ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಕಾಂಗ್ರೆಸ್ ನಾಯಕರ ಪ್ರಚೋದನೆಯಿಂದಲೇ ಗಲಾಟೆ ನಡೆದಿದೆ ಎಂಬುದು ತಿಳಿದು ಬಂದಿದೆ. ಆದರೆ ಪ್ರಕರಣ ದಾಖಲಿಸಿದ್ದು ಬಿಜೆಪಿ ನಾಯಕರ ಮೇಲೆ. ಈ ಪ್ರಕರಣ ಸಿಬಿಐ ತನಿಖೆಗೆ ನೀಡಬೇಕು ಎಂಬುದಾಗಿ ಕೋರ್ ಕಮಿಟಿ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.