ಕನ್ನಡಪ್ರಭ ವಾರ್ತೆ ದಾವಣಗೆರೆ
ನಾಗಮಂಗಲ ಘಟನೆ ಖಂಡಿಸಿ ಪ್ರತಿಭಟಿಸುತ್ತಿದ್ದ ವೇಳೆ ಹಿಂದು ಜಾಗರಣಾ ವೇದಿಕೆ ಮುಖಂಡ ಸತೀಶ ಪೂಜಾರಿ ಹೇಳಿಕೆ ಖಂಡಿಸಿ ಅನ್ಯ ಕೋಮಿನ ಯುವಕನೊಬ್ಬ ಬೇತೂರು ರಸ್ತೆಗೆ ಬರುವಂತೆ ಸವಾಲು ಹಾಕಿದ್ದನು.
ಅಲ್ಲದೇ, ಹಿರಿಯ ನಾಗರೀಕರೊಬ್ಬರು ಅವಾಚ್ಯವಾಗಿ ನಿಂದಿಸಿ, ಬೇತೂರು ರಸ್ತೆಗೆ ಬರುವಂತೆ ಹೇಳಿದನ್ನು ಗಂಭೀರವಾಗಿ ಪರಿಗಣಿಸಿದ ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಗುರುವಾರ ಸಂಜೆ ಇಲ್ಲಿನ ಜಗಳೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದ ಬಳಿ ಜಮಾಯಿಸಿದ್ದರು.ಪ್ರತಿಭಟನೆಗೆ ಮುಂದಾಗಿದ್ದ ಹಿಂದು ಸಂಘಟನೆ ಮುಖಂಡರು, ಕಾರ್ಯಕರ್ತರನ್ನು ಪೊಲೀಸ್ ಅಧಿಕಾರಿಗಳು ಮನವೊಲಿಸಿ, ವಾಪಾಸ್ಸು ಕಳಿಸಲು ಮುಂದಾಗಿದ್ದರು. ಅದೇ ಹೊತ್ತಿಗೆ ಅರಳಿ ಮರ ವೃತ್ತದ ಬಳಿ ಗಣೇಶ ವಿಸರ್ಜನಾ ಮೆರವಣಿಗೆಯೊಂದು ಡಿಜೆ ಸಮೇತ ಬಂದಿದೆ. ಆಗ ಹಿಂದುಗಳು ಜೈಶ್ರೀರಾಮ್ ಘೋಷಣೆ ಮೊಳಗಿಸಿದರೆ, ಮುಸ್ಲಿಂ ಯುವಕರು ಅಲ್ಲಾಹು ಅಕ್ಬರ್ ಎಂಬುದಾಗಿ ಘೋಷಣೆ ಕೂಗ ತೊಡಗಿದ್ದಾರೆ. ಪರಿಸ್ಥಿತಿ ಕೈಮೀರುವ ಸಾಧ್ಯತೆ ಗ್ರಹಿಸಿದ ಪೊಲೀಸರು ಜಾಗೃತರಾಗುವಷ್ಟರಲ್ಲೇ ಕತ್ತಲೆಯಿಂದ ಕಲ್ಲೊಂದು ಮೆರವಣಿಗೆ ಮೇಲೆ ಬಂದು ಬೀಳುತ್ತಿದ್ದಂತೆಯೇ ಪರಿಸ್ಥಿತಿ ಬೇರೆಯದ್ದೇ ರೂಪ ಪಡೆಯಿತು.
ಕಲ್ಲು ತೂರಾಟ ನಡೆಸಿದ್ದ ಗುಂಪುಗಳು, ಕಿಡಿಗೇಡಿಗಳನ್ನು ಪೊಲೀಸರು ಲಾಠಿ ಪ್ರಹಾರ ಮಾಡಿ, ಅಲ್ಲಿಂದ ಓಡಿಸಿದ್ದಾರೆ. ಘಟನೆಯಲ್ಲಿ ಓರ್ವ ವೃತ್ತ ನಿರೀಕ್ಷಕರು, ಒಬ್ಬ ಸಬ್ ಇನ್ಸೆಪೆಕ್ಟರ್, ಇಬ್ಬರು ಪೊಲೀಸ್ ಸಿಬ್ಬಂದಿಗೆ ಕಲ್ಲೇಟು ಬಿದ್ದು, ಕೆಲವರಿಗೆ ಸಣ್ಣಪುಟ್ಟ ರಕ್ತಗಾಯಗಳಾಗಿವೆ. ಕಿಡಿಗೇಡಿಗಳ ಗುಂಪು ಬೈಕ್‌ಗಳನ್ನೇರಿ, ಮಟ್ಟಿಕಲ್ಲು, ಆನೆಕೊಂಡ, ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಜನರಿಲ್ಲದ ಕಡೆಗೆ ಏಕಾಏಕಿ ನುಗ್ಗಿ, ದಿಢೀರನೇ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಿಂದ ಭಯಭೀತರಾದ ಮಹಿಳೆಯರು, ಮಕ್ಕಳು, ವಯೋವೃದ್ಧರು ಪ್ರಾಣ ಕೈಯಲ್ಲಿ ಹಿಡಿದುಕೊಂಡಿದ್ದರು. ಮಟ್ಟಿಕಲ್ಲು, ಆನೆಕೊಂಡ, ನೂರಾನಿ ಶಾದಿ ಮಹಲ್ ಇತರಡೆ ಕಲ್ಲು ತೂರಾಟದ ಸುದ್ದಿ ತಿಳಿದ ಯುವಕರು ಅಲ್ಲಿಗೆ ಧಾವಿಸಿ, ಕಲ್ಲು ತೂರಿದವರ ಸಮುದಾಯದವರಿರುವ ಕಡೆ ನುಗ್ಗಲು ಪ್ರಯತ್ನಿಸಿದ್ದಾರೆ. ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿಗಳಾದ ಮಲ್ಲೇಶ ದೊಡ್ಮನಿ, ಬಿ.ಎಸ್.ಬಸವರಾಜ, ಪಿ.ಬಿ.ಪ್ರಕಾಶ ಸೇರಿ ಅಧಿಕಾರಿಗಳು ವಿವಿಧೆಡೆ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ.