ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ದಕ್ಷಿಣ ಮತಕ್ಷೇತ್ರ ಫ್ಲೈಯಿಂಗ್ ಸ್ಕ್ವಾಡ್ ಚುನಾವಣಾಧಿಕಾರಿ ಸೂರ್ಯಕಾಂತ ಚಂದ್ರಶೇಖರ ಕಾರಭಾರಿ ಅವರು ಏ.28ರಂದು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್ ಅನ್ನು ಪ್ರಿನ್ಸಿಪಲ್ ಜೆಎಂಎಫ್ಸಿ 2ನೇ ನ್ಯಾಯಾಲಯಕ್ಕೂ ರೇಲ್ವೆ ಪೊಲೀಸರು ಸಲ್ಲಿಸಿದ್ದಾರೆ.
ಬೆಂಗಳೂರಿನಿಂದ ಕಲಬುರಗಿಗೆ ರೈಲಿನ ಮೂಲಕ ಹಣದ ಕಂತೆಗಳನ್ನು ತಂದು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಚನ್ನಮಲ್ಲಪ್ಪ ಹಾವಶೆಟ್ಟಿ, ಪ್ರೀತಮ್ ಶಿವಕುಮಾರ್ ಗಂಗಸಿರಿ, ನಾಗೇಶ ಮಲ್ಲಿಕಾರ್ಜುನ ಬಿರಾದಾರ್ ಹಾಗೂ ಮಾಜಿ ಮೇಯರ್ ಶರಣಕುಮಾರ್ ಮೋದಿ ಇವರ ವಿರುದ್ಧ ಜನಪ್ರತಿನಿಧಿ ಕಾಯ್ದೆ 1951 ರ 123 ನೇ ಕಲಂ ಅಡಿಯಲ್ಲಿ 171 ಬಿ, 171 ಸಿ, 171 ಎಫ್ ಅನುಸಾರ ಪ್ರಕರಣ ದಾಖಲಾಗಿದೆ. ಈ ಎಫ್‌ಆರ್‌ನಲ್ಲಿ ಶರಣು ಮೋದಿಯವರನ್ನು 4ನೇ ಆರೋಪಿಯನ್ನಾಗಿ ಮಾಡಲಾಗಿದೆ.ಏ. 27ರಂದು ಬೆಳಗ್ಗೆ ಬೆಂಗಳೂರಿನಿಂದ ಕಲಬುರಗಿಗೆ ರೇಲ್ವೆಯಲ್ಲಿ ಬಂದಿದ್ದ ಚನ್ನಮಲ್ಲಪ್ಪ ಹಾವಶೆಟ್ಟಿ, ಪ್ರೀತಮ ಗಂಗಸಿರಿ ಹಾಗೂ ನಾಗಶ ಮಲ್ಲಿಕಾರ್ಜುನ ಬಿರಾದಾರ್ ಅವರು 2 ಸೂಟ್‌ಕೇಸ್‌ಗಳಲ್ಲಿ ಹಣ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವಾಗಲೇ ರೇಲ್ವೆ ಇಲಾಖೆಯ ವಾಹನ ನಿಲುಗಡೆ ಸ್ಥಳದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದಿದ್ದರು.
ಆದಾಯ ತೆರಿಗೆ ಅಧಿಕಾರಿಗಳು ತಾವೂ ಕೂಡಾ 2 ಕೋಟಿ ರು. ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡಸುತ್ತಿರುವುದಾಗಿ ಹೇಳಿದ್ದಲ್ಲದೆ ಸಹಾಯಕ ಚುನಾವಣಾ ಅಧಿಕಾರಿ ಕಲಬುರಗಿ ದಕ್ಷಿಣ ಇವರಿಗೆ ಪತ್ರ ಬರೆದು ಚುನಾವಣೆ ನೀತಿ ನಿಯಮಗಳಡಿ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ತಾವೂ ಕೈಗೊಳ್ಳಬೇಕೆಂದು ಕೋರಿದ್ದರಿಂದ ಇದೀಗ ಫ್ಲೈಯಿಂಗ್ ಸ್ವ್ಕಾಡ್ ತಂಡದವರು ಪ್ರಕರಣ ದಾಖಲಿಸಿದ್ದಾರೆ.
ಇದಲ್ಲದೆ ಸದರಿ ಹಣವನ್ನು ಬೆಂಗಳೂರಿನಿಂದ ರೈಲಿನಲ್ಲಿ ತಂದು ಚುನಾವಣೆಯಲ್ಲಿ ಅಕ್ರಮವಾಗಿ ಹಂಚಿಕೆ ಮಾಡಲು ಬಳಸಲು ಯೋಜಿಸಲಾಗಿತ್ತು ಎಂದು ಬಲವಾದ ಶಂಕೆಯೂ ಮೂಡಿದೆ ಎಂದು ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳು ತಮ್ಮ ದೂರಿನಲ್ಲಿ ಅಭಿಪ್ರಾಯಪಟ್ಟಿದ್ದು ಇದು ಕೂಡಾ ಪ್ರಥಮ ವರ್ತಮಾನ ವರದಿಯಲ್ಲಿ ದಾಖಲಾಗಿದೆ.