8 ಕಿಮೀ ದೂರದ ಜಾಲಿಕೋಡಿ ಸಮುದ್ರದಲ್ಲಿ ಮಾರಿ ಮೂರ್ತಿ ವಿಸರ್ಜನೆಕನ್ನಡಪ್ರಭ ವಾರ್ತೆ ಭಟ್ಕಳ
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಮಾರಿಗುಡಿಯಲ್ಲಿ ಎರಡು ದಿನಗಳ ಕಾಲ ನಡೆದ ಮಾರಿಜಾತ್ರೆಯಲ್ಲಿ ಸಾವಿರಾರು ಭಕ್ತರು ಗದ್ದುಗೆಯಲ್ಲಿ ವಿರಾಜಮಾನವಾದ ಮಾರಿಯಮ್ಮನಿಗೆ ಹೂವು, ಹಣ್ಣು-ಕಾಯಿ, ತೊಟ್ಟಿಲು, ಹೂವಿನ ಪೇಟಾ, ಕಣ್ಣು ಇತ್ಯಾದಿಗಳನ್ನು ಹರಕೆ ಸಲ್ಲಿಸಿದರು. ಮಾಜಿ ಸಚಿವ ಮಂಕಾಳ ವೈದ್ಯ ಸೇರಿ ಹಲವು ಗಣ್ಯರು ಮಾರಿಯಮ್ಮನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಗುರುವಾರ ಸಂಜೆ ೪.೨೦ಕ್ಕೆ ಮಾರಿಯಮ್ಮನಿಗೆ ಅಂತಿಮ ಪೂಜೆ ಸಲ್ಲಿಸಿ, ಭಕ್ತರ ಪರವಾಗಿ ಪ್ರಾರ್ಥಿಸಿದ ಬಳಿಕ ಮಾರಿ ಉತ್ಸವಮೂರ್ತಿಯನ್ನು ಬೃಹತ್ ಮೆರವಣಿಗೆಯಲ್ಲಿ ಎಂಟು ಕಿಮೀ ದೂರದ ಜಾಲಿಕೋಡಿ ಸಮುದ್ರದಲ್ಲಿ ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ ವಿಸರ್ಜಿಸಲಾಯಿತು. ಈ ಸಲ ಸಮುದ್ರ ತೀರದಲ್ಲಿ ಮಾರಿ ವಿಸರ್ಜನೆಯ ಅಂತಿಮ ವಿಧಿ ವಿಧಾನದ ಯಾವುದೇ ರೀತಿಯ ಫೋಟೋ, ವೀಡಿಯೊ ಅಥವಾ ಇತರೆ ಚಿತ್ರಿಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಮಾರಿಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಮಾರಿಗುಡಿ ಆಡಳಿತ ಸಮಿತಿಯ ಅಧ್ಯಕ್ಷ ಶ್ರೀಪಾದ ಕಂಚುಗಾರ, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಮುಖರಾದ ಗೋವಿಂದ ನಾಯ್ಕ, ಕೃಷ್ಣಾ ನಾಯ್ಕ, ದಿನೇಶ ನಾಯ್ಕ, ಶ್ರೀಕಾಂತ ನಾಯ್ಕ, ಶ್ರೀನಿವಾಸ ನಾಯ್ಕ ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಾರಿಮೂರ್ತಿಯ ವಿಸರ್ಜನೆ ಹಿನ್ನೆಲೆ ಮಾರಿಗುಡಿಯಿಂದ ಜಾಲಿಕೋಡಿ ಸಮುದ್ರದ ವರೆಗೂ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ರಸ್ತೆ ಬದಿಯಲ್ಲಿ ನಿಂತು ಮಾರಿಗೆ ನಮಸ್ಕರಿಸಿದರು.