ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಪಿಂಕ್ ಮತಗಟ್ಟೆ ಎಂದರೆ, ಮತಗಟ್ಟೆಗೆ ಮಹಿಳಾ ಮತದಾರರನ್ನು ಆಕರ್ಷಣೆ ಮಾಡುವ ದೃಷ್ಟಿಯಿಂದ ಪಿಂಕ್ ಬಣ್ಣವನ್ನು ಬಳಿದು ಗಮನ ಸೆಳೆಯಲಾಗುತ್ತದೆ. ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿಗಳೇ ಕರ್ತವ್ಯ ನಿರ್ವಹಿಸುವುದು ಈ ಪಿಂಕ್ ಮತಗಟ್ಟೆಗಳ ಒಂದು ವಿಶೇಷ.ತಾಲೂಕಿನ ಖಾನಾಪುರ ಎಸ್.ಪಿ. ಗ್ರಾಮದ ಪಿಂಕ್ ಮತಗಟ್ಟೆ ಸಂಖ್ಯೆ 104 ಇದ್ದು ಈ ಮತಗಟ್ಟೆಯಲ್ಲಿ 400 ಪುರುಷ ಮತದಾರರಿದ್ದರೆ, 332 ಮಹಿಳಾ ಮತದಾರರಿದ್ದು ಒಟ್ಟು732 ಮತದಾರರು ಮತಚಲಾಯಿಸಲಿದ್ದಾರೆ. ಗುಳೇದಗುಡ್ಡ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಒಂದು ಪಿಂಕ್ ಮತಗಟ್ಟೆ (ಸಂಖ್ಯೆ 23) ಸ್ಥಾಪಿಸಲಾಗಿದ್ದು, ಈ ಮತಗಟ್ಟೆಯಲ್ಲಿ 249 ಪುರುಷ ಮತದಾರರಿದ್ದರೆ, 225 ಮಹಿಳಾ ಮತದಾರರಿದ್ದಾರೆ. ಒಟ್ಟು 474 ಮತದಾರರು ಮತ ಚಲಾಯಿಸಲಿದ್ದಾರೆ.
ಪಿಂಕ್ ಮತಗಟ್ಟೆಯಂತೆಯೇ ಗುಳೇದಗುಡ್ಡ ಪಟ್ಟಣದ ಭಂಡಾರಿ ಕಾಲೇಜಿನಲ್ಲಿ ಯುವ ಮತಗಟ್ಟೆ (ಸಂಖ್ಯೆ 44) ಸ್ಥಾಪಿಸಲಾಗಿದ್ದು, ಈ ಮತಗಟ್ಟೆಯಲ್ಲಿ 471 ಪುರುಷ ಮತದಾರರಿದ್ದರೆ, 468 ಮಹಿಳಾ ಮತದಾರರಿದ್ದಾರೆ. ಒಟ್ಟು 939 ಮತದಾರರಿದ್ದಾರೆ. ಗುಳೇದಗುಡ್ಡ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 85 ಮತಗಟ್ಟೆ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ 51 ಮತಗಟ್ಟೆಗಳನ್ನು ಹಾಗೂ ಗುಳೇದಗುಡ್ಡ ಪಟ್ಟಣದಲ್ಲಿ 31 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.