ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆ
ತಾಲೂಕಿನ ಅಂತರಸಂತೆ ಹೋಬಳಿ ಡಿ.ಬಿ.ಕುಪ್ಪೆ ಗ್ರಾಪಂಗೆ ಸೇರಿದ ನೆಟ್ಕಲ್ ಗುಂಡಿ ಹಾಡಿಯ (ಆಶ್ರಮ ಶಾಲೆಯ ಪಕ್ಕದ) ಅಂಗನವಾಡಿ ಕಾರ್ಯಕರ್ತೆಯಾದ ಸೀತೆ ಮತ್ತು ಮಾದೇವಿ ಎಂಬವರ ಮನೆಯ ಮೇಲೆ ಒಂಟಿ ಸಲಗ ದಾಳಿ ಮಾಡಿ ಹಾನಿ ಮಾಡಿದೆ.ಮಂಗಳವಾರ ಬೆಳಗಿನ ಸಮಯದಲ್ಲಿ ಹೊಸ್ತಿಲ ಬಳಿ ಕಸ ಗುಡಿಸುತ್ತಿದ್ದಾಗ ಮನೆ ಮುಂದೆ ಪ್ರತ್ಯೇಕ್ಷನಾದ ಒಂಟಿ ಸಲಗ ಅಟ್ಟಿಸಿಕೊಂಡು ಬರಲಾಗಿ, ಮಾದೇವಿ ಕೂಡಲೆ ಮನೆಯೊಳಕ್ಕೆ ಓಡಲಾಗಿ ಹಿಂದೆಯೇ ಬಂದ ಒಂಟಿ ಸಲಗ ಮನೆಯ ಮುಂಭಾಗ ಮತ್ತು ಸುತ್ತಲೂ ತನ್ನ ಸೊಂಡಿಲಿನಿಂದ ಎಳೆದಾಡಿ ಮೇಲ್ಛಾವಣಿಯ ಹೆಂಚುಗಳು ಮತ್ತು ಹೊರಗಿನ ಗೋಡೆಗಳನ್ನು ಕೆಡವಿ ಹಾಕಿದ್ದು, ಸಾಲದೆಂಬಂತೆ ಪಕ್ಕದ ಮನೆಯ ಸೀತಾ ಎಂಬ ಅಂಗನವಾಡಿ ಕಾರ್ಯಕರ್ತೆ ಮನೆಯನ್ನು ಹಾನಿ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜಿನುಗುಡುವ ಮಳೆಯ ನಡುವೆಯೂ ದಿಢೀರ್ ಎಂದು ಆದಿವಾಸಿ ಮಹಿಳೆ ಮಾದೇವಿ ಅವರ ಮನೆಯ ಎದುರು ಬಂದ ಆನೆ ಸೊಂಡಿಲಿನಿಂದ ಮೇಲ್ಚಾವಣಿಯನ್ನು ಎಳೆದಾಡಿದೆ. ತಕ್ಷಣ ಕಿವಿ ಸರಿಯಾಗಿ ಕೇಳದ ಮಾದೇವಿ ಓಡಿ ಹೋಗಿ ಮನೆಯೊಳಗೆ ಅವಿತು ಕೊಂಡಿದ್ದಾಳೆ. ಮನ ಬಂದಂತೆ ಹಾನಿ ಮಾಡಿದ ಸಲಗ ಪಕ್ಕದ ಸೀತೆ ಎಂಬುವರ ಮನೆಯ ಮೇಲು ದಾಳಿ ಮಾಡಲು ಮುಂದಾಗಿದೆ. ದೃಶ್ಯವನ್ನು ಕಣ್ಣಾರೆ ಕಂಡ ಸೀತೆ ಮತ್ತು ಆಕೆಯ ಎರಡು ಚಿಕ್ಕಗಂಡು ಮಕ್ಕಳು (ಎರಡು ಮಕ್ಕಳು ವಿಶೇಷಚೇತನರು) ಎದುರಿ ಭಯಭೀತರಾಗಿ ಮನೆಯ ಮೂಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಾರೆ. ಸದ್ದು ಗದ್ದಲ ವಿಲ್ಲದೇ ಸಂದರ್ಭದಲ್ಲಿ ಸಲಗ ಮನಸ್ಸೊ ಇಚ್ಚೆ ಮನೆಯ ಮುಂಭಾಗವನ್ನು ಕೆಡವಿ ಹಾಕಿದೆ.ಆದರೆ ಆನೆ ಕಂಡ ತಾಯಿ ಮತ್ತು ಮಕ್ಕಳು ಮೂಲೆಯಲ್ಲಿ ಅವಿತುಕೊಂಡಿದ್ದ ಪರಿಣಾಮವಾಗಿ ಅನಾಹುತದಿಂದ ಪಾರಾಗಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯವಾಗಿರದೆ ಮನೆಗಳು ಹಾನಿಯಾಗಿವೆ.
ಘಟನೆ ನಡೆದು ಎರಡು ದಿನವಾದರೂ ಪ. ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾಗಲಿ. ಗ್ರಾಪಂ ಅಧಿಕಾರಿಗಳಾಗಲಿ. ತಾಲೂಕು ಆಡಳಿತವಾಗಲಿ ಅಥವಾ ಸಂಬಂಧಿಸಿದ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡದಿರುವುದು ಮಾತ್ರ ಅಧಿಕಾರಿಗಳ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈಗಲಾದರೂ ಜಿಲ್ಲಾಡಳಿತ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಹಾನಿಗೊಳಗಾದ ಆದಿವಾಸಿ ಮಹಿಳೆಯರಾದ ಮಾದೇವಿ ಮತ್ತು ಸೀತೆ ಕುಟುಂಬಕ್ಕೆ ಪರಿಹಾರ ನೀಡುವರೇ ಕಾದು ನೋಡಬೇಕಾಗಿದೆ.