ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಇಬ್ಬರು ಯೋಧರು ತಮ್ಮ ಕರ್ತವ್ಯಕ್ಕೆ ಮರು ಹಾಜರಾಗಲು ಶನಿವಾರ ಸಂಜೆ ರೈಲಿನ ಮೂಲಕ ತಮ್ಮ ಕರ್ತವ್ಯದ ಕೇಂದ್ರ ಕಚೇರಿಗೆ ವರದಿ ಮಾಡಿಕೊಳ್ಳಲು ಪ್ರಯಾಣ ಬೆಳೆಸಿದರು.
ಹಾವೇರಿ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಜೆಯ ಮೇಲೆ ತೆರಳಿದ್ದ ವಿವಿಧ ಸೇನಾ ತುಕಡಿಗಳ ಯೋಧರಿಗೆ ತುರ್ತಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಬಂದಿದೆ. ಜಿಲ್ಲೆಯ ಇಬ್ಬರು ಯೋಧರು ತಮ್ಮ ಕರ್ತವ್ಯಕ್ಕೆ ಮರು ಹಾಜರಾಗಲು ಶನಿವಾರ ಸಂಜೆ ರೈಲಿನ ಮೂಲಕ ತಮ್ಮ ಕರ್ತವ್ಯದ ಕೇಂದ್ರ ಕಚೇರಿಗೆ ವರದಿ ಮಾಡಿಕೊಳ್ಳಲು ಪ್ರಯಾಣ ಬೆಳೆಸಿದರು.
ಹಾವೇರಿ ನಗರದ ಬಿಎಸ್‌ಎಫ್ ಯೋಧ ಶಶಾಂಕ್ ಹಾಗೂ ಸಿಆರ್‌ಪಿಎಫ್ ಯೋಧ ಸಂಜೀವ ಸಂಗೂರ ಅವರು ರಜೆಯ ಪ್ರಯುಕ್ತ ತಮ್ಮ ಊರುಗಳಿಗೆ ಆಗಮಿಸಿದ್ದರು. ಪಹಲ್ಗಾಮ್ ದಾಳಿ ಬಳಿಕ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನೆ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ರಜೆ ಮೇಲೆ ತೆರಳಿರುವ ಸೈನಿಕರಿಗೆ ತುರ್ತಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸಂದೇಶ ಬಂದ ಬೆನ್ನಲ್ಲೇ ಹಾವೇರಿಯ ಸೈನಿಕರು ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಬೆಳೆಸಿದರು.
ಈ ಇಬ್ಬರೂ ಯೋಧರನ್ನು ಶನಿವಾರ ಸಂಜೆ ಹಾವೇರಿಯ ಮೈಲಾರ ಮಹದೇವಪ್ಪ ರೈಲು ನಿಲ್ದಾಣದಲ್ಲಿ ನಾಗರಿಕರು, ಮಾಜಿ ಸೈನಿಕರು ಮತ್ತು ಕುಟುಂಬಸ್ಥರು ಧೈರ್ಯದ ಮಾತು ಹೇಳಿ ಹೆಮ್ಮೆಯಿಂದ ಬೀಳ್ಕೊಟ್ಟರು.
ರೈಲ್ವೆ ನಿಲ್ದಾಣ, ಪ್ರವಾಸಿ ತಾಣಗಳಲ್ಲಿ ಭದ್ರತಾ ಪರಿಶೀಲನೆ:
ಆಪರೇಷನ್ ಸಿಂದೂರ್ ಹಿನ್ನೆಲೆಯಲ್ಲಿ ದೇಶಾದ್ಯಂತ ಭದ್ರತಾ ಕಾರ್ಯಕ್ಕೆ ಒತ್ತು ನೀಡುವಂತೆ ಕೇಂದ್ರ ಸರ್ಕಾರ ನೀಡಿರುವ ಸೂಚನೆ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಭದ್ರತಾ ಪರಿಶೀಲನೆ ನಡೆಸುವಂತೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಹಾವೇರಿ ಜಿಲ್ಲೆಯ ರೈಲ್ವೆ ಸ್ಟೇಷನ್, ಪ್ರಮುಖ ಪ್ರವಾಸಿ ತಾಣಗಳು, ಹೋಟೆಲ್, ಪುರಾತತ್ವ ಇಲಾಖೆ ಸಂಬಂಧಿತ ಸ್ಥಳಗಳು, ಹೆಚ್ಚು ಜನರು ಸೇರುವಂತಹ ಪ್ರದೇಶಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಾವೇರಿ ಜಿಲ್ಲಾ ಪೊಲೀಸ್‌ನ ವಿವಿಧ ತಪಾಸಣಾ ತಂಡಗಳಿಂದ ತಪಾಸಣೆ ನಡೆಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.