ಎರಡು ವೇದಿಕೆ, 14 ದಿನ, 600 ಕಾರ್ಯಕ್ರಮ, 3 ಸಾವಿರಕ್ಕೂ ಹೆಚ್ಚು ಕಲಾವಿದರು !

KannadaprabhaNewsNetwork |  
Published : Apr 30, 2026, 02:30 AM IST
ವೈಶಾಖ ನಟನಮ್ 2026ರಲ್ಲಿ ಕಾರ್ಯಕ್ರಮ ನೀಡಲಿರುವ ಕಲಾವಿದರು | Kannada Prabha

ಸಾರಾಂಶ

ಎರಡು ವೇದಿಕೆ, 14 ದಿನಗಳು, 600 ನಿಗದಿತ ಕಾರ್ಯಕ್ರಮ, 3 ಸಾವಿರಕ್ಕೂ ಹೆಚ್ಚು ಕಲಾವಿದರು, 200ಕ್ಕೂ ಅಧಿಕ ಗಂಟೆಗಳ ಕಾರ್ಯಕ್ರಮಕ್ಕೆ ಗಡಿನಾಡು ಕೇರಳದ ಕಾಸರಗೋಡಿನ ಬೇಕಲ್ ಗೋಕುಲಂ ಗೋಶಾಲಾ ಪರಂಪರಾ ವಿದ್ಯಾಪೀಠಂ ಆವರಣ ಸಿದ್ಧಗೊಂಡಿದೆ. ಗುರುವಾರದಿಂದ (ಏ.30) ಮುಂದಿನ 14 ದಿನಗಳ ಕಾಲ ಇಲ್ಲಿ ‘ವೈಶಾಖ ನಟನಮ್ 2026 - ರಾಷ್ಟ್ರೀಯ ನೃತ್ಯ ಹಬ್ಬ’ ಕಾರ್ಯಕ್ರಮ ನಡೆಯಲಿದ್ದು, ಇದೊಂದು ರಾಷ್ಟ್ರೀಯ ದಾಖಲೆ ಬರೆಯಲಿದೆ.

ಮಂಗಳೂರು: ಎರಡು ವೇದಿಕೆ, 14 ದಿನಗಳು, 600 ನಿಗದಿತ ಕಾರ್ಯಕ್ರಮ, 3 ಸಾವಿರಕ್ಕೂ ಹೆಚ್ಚು ಕಲಾವಿದರು, 200ಕ್ಕೂ ಅಧಿಕ ಗಂಟೆಗಳ ಕಾರ್ಯಕ್ರಮಕ್ಕೆ ಗಡಿನಾಡು ಕೇರಳದ ಕಾಸರಗೋಡಿನ ಬೇಕಲ್ ಗೋಕುಲಂ ಗೋಶಾಲಾ ಪರಂಪರಾ ವಿದ್ಯಾಪೀಠಂ ಆವರಣ ಸಿದ್ಧಗೊಂಡಿದೆ. ಗುರುವಾರದಿಂದ (ಏ.30) ಮುಂದಿನ 14 ದಿನಗಳ ಕಾಲ ಇಲ್ಲಿ ‘ವೈಶಾಖ ನಟನಮ್ 2026 - ರಾಷ್ಟ್ರೀಯ ನೃತ್ಯ ಹಬ್ಬ’ ಕಾರ್ಯಕ್ರಮ ನಡೆಯಲಿದ್ದು, ಇದೊಂದು ರಾಷ್ಟ್ರೀಯ ದಾಖಲೆ ಬರೆಯಲಿದೆ.

ಈ ವರ್ಷ ಎರಡು ವೇದಿಕೆಗಳಾದ ಧೇನು ಮಂಟಪ (ಹೊಸ ವೇದಿಕೆ) ಮತ್ತು ನಂದಿ ಮಂಟಪದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ನೂತನ ವೇದಿಕೆ ಹಾಗೂ ಗೋಶಾಲೆಯ ಕಟ್ಟಡವನ್ನು ಏ.30ರಂದು ಸಂಜೆ 3 ಗಂಟೆಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸುವರು. ಕಲಾವಿದೆ ಪದ್ಮಾಸುಬ್ರಹ್ಮಣ್ಯಂ ಉದ್ಘಾಟಿಸುವರು.

ಏ.30ರಂದು ಸಂಜೆ ಗಾಯಕ ವಿಜಯ ಪ್ರಕಾಶ್ ಅವರ ತಂಡದಿಂದ ಧೇನು ಮಂಟಪ ವೇದಿಕೆಯಲ್ಲಿ ಪದ್ಮವಿಭೂಷಣ ಡಾ.ಪದ್ಮ ಸುಬ್ರಹ್ಮಣ್ಯಂ ಅವರಿಂದ ನೃತ್ಯ, ಗಾಯಕ ವಿಜಯ್ ಪ್ರಕಾಶ್ ಅವರಿಂದ ನಾದಾರ್ಚನ ಸಂಗೀತಾ ಕಾರ್ಯಕ್ರಮ ನಡೆಯಲಿದೆ. ಉಳಿದಂತೆ ಮೇ 1ರಿಂದ 14ರ ವರೆಗೆ ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 10ರ ವರೆಗೆ ಎರಡೂ ವೇದಿಕೆಗಳಲ್ಲಿ ಪ್ರತಿ ದಿನ 14 ಗಂಟೆಗಳಂತೆ ದೇಶದ ಸುಮಾರು 20 ರಾಜ್ಯಗಳ ಪ್ರಸಿದ್ಧ ಕಲಾವಿದರಿಂದ ವಿವಿಧ ಬಗೆಯ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ. ಒಂದು ಕಲಾವಿದರ ತಂಡ ಕನಿಷ್ಠ 10 ನಿಮಿಷದಿಂದ ಗರಿಷ್ಠ 1 ಗಂಟೆ ವರೆಗೆ ಕಾರ್ಯಕ್ರಮ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕ ಕಲಾವಿದರಿಗೆ ಸನ್ಮಾನ, ಕಾಸರಗೋಡು ಜಿಲ್ಲೆಯ ಕ್ಲಾಸಿಕಲ್ ಡಾನ್ಸ್‌ನಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ 42 ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ಪ್ರತಿದಿನ 3ರಿಂದ 4 ಸಾವಿರ ಮಂದಿ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಮೇ 1ರಿಂದ 14ರ ವರೆಗೆ 14 ದಿನಗಳಲ್ಲಿ 3,000 ಕಲಾವಿದರಿಂದ 200ಕ್ಕೂ ಹೆಚ್ಚು ಗಂಟೆಗಳ ಸುಮಾರು 600 ಕಾರ್ಯಕ್ರಮಗಳು ನಡೆಯಲಿದೆ. ಪದ್ಮಶ್ರೀ ಪುರಸ್ಕೃತ ನರ್ತಕಿ ನಟರಾಜನ್ ಅವರಿಂದ ಭರತನಾಟ್ಯ, ಪದ್ಮಶ್ರೀ ಮೀನಾಕ್ಷಿ ಚಿತ್ತರಂಜನ್ ಅವರಿಂದ ನೃತ್ಯ, ಪ್ರಿಯದರ್ಶಿನಿ ಗೋವಿಂದ್ ಸೇರಿದಂತೆ ಕಲಾವಿದರು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ. ಭರತನಾಟ್ಯಂ, ಕೂಚಿಪುಡಿ, ಮೋಹಿನಿಯಾಟ್ಟಂ, ದಶಾವತಾರ, ಕಥಕ್, ಕೇರಳನಟನಮ್, ಒಡಿಸ್ಸಿ, ನವಜನರ್ದನ ಪಾರಿಜತಂ, ಸೆಮಿಕ್ಲಾಸಿಕಲ್ ಫ್ಯುಶನ್, ತಿರುವಾದಿರ, ಯಕ್ಷಗಾನ ಮೊದಲಾದ ನೃತ್ಯ ಪ್ರಕಾರಗಳು ಪ್ರದರ್ಶನವಾಗಲಿದೆ.

ಗೋವುಗಳ ಎದುರು ಕಾರ್ಯಕ್ರಮ: ಬೇಕಲ್‌ನಲ್ಲಿ ಜ್ಯೋತಿಷಿ ವಿಷ್ಣು ಹೆಬ್ಬಾರ್ ಹಾಗೂ ವಿಜ್ಞಾನಿ ಡಾ.ನಾಗರತ್ನ ಹೆಬ್ಬಾರ್ ದಂಪತಿ 2010ರಿಂದ 2 ಜಾನುವಾರುಗಳಿಂದ ಗೋಶಾಲೆ ಆರಂಭಿಸಿದ್ದರು. ಇಂದು ಅಲ್ಲಿನ ಗೋಶಾಲೆಯಲ್ಲಿ ದೇಶಿಯ ತಳಿಗಳಾದ ಮಲ್ನಾಡು ಗಿಡ್ಡ, ಕಾಸರಗೋಡು ಗಿಡ್ಡ, ವೆಚೂರ್, ಗೀರ್, ಕಾನ್‌ಕ್ರೇಜ್, ಕಾಂಗಯಂ, ಬರಗೂರು, ಹಳ್ಳಿಕಾರ್, ಒಂಗೊಲ್ ತಳಿಯ 268 ಜಾನುವಾರುಗಳಿವೆ. ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿರುವ ಈ ಗೋಶಾಲೆಯ ಗೋವುಗಳಿಂದ ದೊರೆಯುವ ಹಾಲನ್ನು ಮಾರಾಟ ಮಾಡುವುದಿಲ್ಲ, ಬದಲಿಗೆ ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇಲ್ಲಿನ ಗೋಶಾಲೆ ಪ್ರಸಿದ್ಧ ಪಡೆದು ಇದೀಗ ಕೇರಳ ಸರ್ಕಾರದಿಂದ ಪ್ರವಾಸಿ ತಾಣದ ಮಾನ್ಯತೆ ಪಡೆದಿದೆ. ಇಲ್ಲಿಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಆಗಮಿಸುತ್ತಾರೆ. ಇಲ್ಲಿನ ವಿಚಾರದ ಬಗ್ಗೆ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕೇರಳ ಸಂಶೋಧನಾ ಅಧ್ಯಯನ ನಡೆಸುತ್ತಿದೆ. 2021ರಿಂದ ಇಲ್ಲಿ ಸಂಗೀತಾ ಕಾರ್ಯಕ್ರಮ, 2024ರಿಂದ ನೃತ್ಯ ಕಾರ್ಯಕ್ರಮ ಆರಂಭಿಸಲಾಗಿದೆ. ವಾರ್ಷಿಕವಾಗಿ ದೀಪಾವಳಿಯ 15 ದಿನಗಳ ಕಾಲ ಸಂಗೀತ ಹಬ್ಬ ನಡೆದರೆ, ಮೇ ತಿಂಗಳಲ್ಲಿ 15 ದಿನಗಳ ನೃತ್ಯ ಹಬ್ಬ ನಡೆಸಲಾಗುತ್ತದೆ. ತಿಂಗಳಿಗೊಮ್ಮೆ ಇಲ್ಲಿ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ, ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎನ್ನುತ್ತಾರೆ ವಿಷ್ಣುಪ್ರಸಾದ್ ಹೆಬ್ಬಾರ್. ಇಲ್ಲಿ ಕಾರ್ಯಕ್ರಮ ನೀಡಲು ವಾರ್ಷಿಕವಾಗಿ ಕಲಾವಿದರಿಂದ ಆಹ್ವಾನಿಸಲಾಗುತ್ತದೆ. ಅಂತಿಮ ಪಟ್ಟಿಯಂತೆ ಅವರಿಗೆ ದಿನಗಳನ್ನು, ಸಮಯಗಳನ್ನು ನಿಗದಿ ಮಾಡಲಾಗುತ್ತದೆ. ಅದರಂತೆ ಇಲ್ಲಿ ಕಾರ್ಯಕ್ರಮ ನೀಡಲು ಮುಂದೆ ಬರುವ ದೇಶದ ಪ್ರಸಿದ್ಧ ಕಲಾವಿದರು ಗೋಶಾಲೆಯ ಗೋವುಗಳ ಮುಂದೆ ಸಾವಿರಾರು ಪ್ರೇಕ್ಷಕರ ಎದುರು ಉಚಿತವಾಗಿಯೇ ಕಾರ್ಯಕ್ರಮ ನೀಡುತ್ತಾರೆ ಎನ್ನುತ್ತಾರೆ ಸಂಘಟಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್‌ ಸಿಲಿಂಡರ್‌ ಕೊರತೆ: ಹೊಟೇಲ್ ಉದ್ಯಮ ಕಂಗಾಲು
ದ.ಕ. ಹಾಲು ಉತ್ಪಾದಕರ ಒಕ್ಕೂಟಕ್ಕೆ 10.61 ಕೋಟಿ ರು.ನಿವ್ವಳ ಲಾಭ