ಯುಸಿಎಸ್‌ಎಲ್‌ 99 ಮೀ ಉದ್ದದ ಹಡಗು ಲೋಕಾರ್ಪಣೆ

KannadaprabhaNewsNetwork |  
Published : Oct 27, 2026, 02:45 AM IST
ಲೋಕಾರ್ಪಣೆಗೊಳಿಸಲಾದ ವಿಲ್ಸನ್ ಎನರ್ಜಿ 1 ಹಡಗು | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ‘ಮ್ಯಾರಿಟೈಮ್ ಇಂಡಿಯಾ ವಿಷನ್ 2030/2047’ ಮಾರ್ಗಸೂಚಿಯಲ್ಲಿ ಇಲ್ಲಿನ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೆಡ್ (ಯುಸಿಎಸ್‌ಎಲ್‌) ನಲ್ಲಿ ನಾರ್ವೆ ದೇಶಕೊಸ್ಕರ ನಿರ್ಮಿಸಿದ ಬೃಹತ್ ಸರಕುಸಾಗಣೆ ಹಡಗನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಲ್ಪೆ

ಕೇಂದ್ರ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ‘ಮ್ಯಾರಿಟೈಮ್ ಇಂಡಿಯಾ ವಿಷನ್ 2030/2047’ ಮಾರ್ಗಸೂಚಿಯಲ್ಲಿ ಇಲ್ಲಿನ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೆಡ್ (ಯುಸಿಎಸ್‌ಎಲ್‌) ನಲ್ಲಿ ನಾರ್ವೆ ದೇಶಕೊಸ್ಕರ ನಿರ್ಮಿಸಿದ ಬೃಹತ್ ಸರಕುಸಾಗಣೆ ಹಡಗನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.ಇದೇ ಸಂದರ್ಭ ಇನ್ನೊಂದು ಬೃಹತ್ ಸರಕುಸಾಗಣೆ ಹಡಗಿನ ‘ತಳಪಾಯ ಸ್ಥಾಪನೆ’ (ಕೀಲ್ ಲೇಯಿಂಗ್) ಹಾಗೂ ಮತ್ತೊಂದು ಹಡಗಿನ ನಿರ್ಮಾಣಕ್ಕೆ ‘ಉಕ್ಕು ಕತ್ತರಿಸುವ’ (ಸ್ಟೀಲ್ ಕಟ್ಟಿಂಗ್) ಕಾರ್ಯಕ್ಕೆ ಚಾಲನೆ ನೀಡಲಾಯಿತು.ಭಾರತದಲ್ಲಿರುವ ನಾರ್ವೆಯ ರಾಯಭಾರಿ ಮೇ ಎಲಿನ್ ಸ್ಟೆನರ್ ಅವರ ಉಪಸ್ಥಿತಿಯಲ್ಲಿ, ನಾರ್ವೆಯ ‘ವಿಲ್ಸನ್ ಎಎಸ್‌ಎ’ ಕಂಪೆನಿಯ ಅಧ್ಯಕ್ಷ ಐವಿಂಡ್ ಐಡೆಸ್ವಿಕ್ ಮತ್ತವರ ಮಗಳು ಅನ್ನಾ ಐಡೆಸ್ವಿಕ್ ಅವರು ‘ವಿಲ್ಸನ್ ಎನರ್ಜಿ 1’ ಎಂಬ ಬೃಹತ್ ಹಡಗನ್ನು ಲೋಕಾರ್ಪಣೆಗೊಳಿಸಿದರು. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಕಾರ್ಯದರ್ಶಿ ವಿಜಯಕುಮಾರ್ ಅವರು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉಪಸ್ಥಿತರಿದ್ದರು.

2021ರಲ್ಲಿ ಆರಂಭವಾದ ಯುಸಿಎಸ್‌ಎಲ್‌ ನಲ್ಲಿ ‘ವಿಲ್ಸನ್ ಎನರ್ಜಿ 1’ ಇದುವರೆಗೆ ನಿರ್ಮಾಣವಾದ ಅತೀ ದೊಡ್ಡ ಹಡಗು ಎಂಬ ಮೈಲಿಗಲ್ಲನ್ನು ಸ್ಥಾಪಿಸಿದೆ.ಈ ಹಡಗು 99 ಮೀ. ಉದ್ದ. 15.85 ಅಡಿ ಅಗಲವಿದ್ದು, 2200 ಟನ್ ಭಾರವಿದೆ. ಇದು 6300 ಟನ್ ಸರಕು ಸಾಗಣಾ ಸಾಮರ್ಥ್ಯ (3,16,278 ಘನ ಅಡಿ ಸರಕು) ವನ್ನು ಹೊಂದಿದೆ. ಇದಕ್ಕೆ ಸುಮಾರು 15 ಮಿಲಿಯನ್ ಯೂರೋಸ್ (160 ಕೋಟಿ ರು.) ವೆಚ್ಚ ತಗಲಿದೆ.ಕೊಚ್ಚಿನ್ ಶಿಪ್‌ಯಾರ್ಡ್ ಸ್ವಾಮ್ಯದ ಯುಸಿಎಸ್‌ಎಲ್‌ ಘಟಕವು ವಿಲ್ಸನ್ ಎಎಸ್‌ಎ ಕಂಪೆನಿಗೆ ಇಂತಹ 8 ಸರಕು ಹಡಗುಗಳನ್ನು ನಿರ್ಮಿಸಲು , ಮೊದಲ ಹಡಗು ಈಗಾಗಲೇ ಹಸ್ತಾಂತರವಾಗಿದೆ. 2ನೇ ಹಡಗನ್ನು ಸೋಮವಾರ ಉದ್ಘಾಟಿಸಲಾಗಿದೆ. ಇನ್ನುಳಿದ 6 ಹಡಗುಗಳನ್ನು 2028ರ ಮಳ‍‍ೆಗಾಲಕ್ಕೆ ಮೊದಲು ನಿರ್ಮಿಸಿ ಹಸ್ತಾಂತರಿಸಲಾಗುತ್ತದೆ ಎಂದು ಯುಸಿಎಸ್‌ಎಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಕುಮಾರ್ ಅಂಬಲಪರಂಬಿಲ್ ತಿಳಿಸಿದರು.ಅಲ್ಲದೆ ಯುಸಿಎಸ್‌ಎಲ್‌ ಘಟಕವು ಈ ಹಿಂದೆ ವಿಲ್ಸನ್ ಎಎಸ್‌ಎಗಾಗಿ 89 ಮೀ. ಉದ್ದದ 3,800 ಟನ್ ಒಣ ಸರಕು ಸಾಮರ್ಥ್ಯದ 6 ಹಡಗುಗಳನ್ನು ನಿರ್ಮಿಸಿಕೊಟ್ಟಿದೆ. ಈ ಹಡಗುಗಳನ್ನು ಕೇವಲ 14 ತಿಂಗಳಲ್ಲಿ ನಿರ್ಮಿಸಲಾಗಿದ್ದು, ಯುಸಿಎಸ್‌ಎಲ್‌ ಘಟಕ ಈಗ ಭಾರತದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಹಡಗು ನಿರ್ಮಾಣ ಮಾಡುವ ಸಂಸ್ಥೆಯಾಗಿದೆ ಎಂದು ಹರಿಕುಮಾರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ರಾಮಾಯಣದಿಂದ ಸಮಾಜಕ್ಕೆ ಸಂದೇಶ
ರುದ್ರಭೂಮಿ ಸ್ವಚ್ಛಗೊಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು