ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲೆಯಲ್ಲಿ ವಾಡಿಕೆ ಮಳೆ 4,535 ಮಿ.ಮೀ. ಇದ್ದು, ಪ್ರಸಕ್ತ ಸಾಲಿನಲ್ಲಿ 3525 ಮಿ.ಮೀ. ನಷ್ಟು ಮಳೆಯಾಗಿದ್ದು, ಒಟ್ಟಾರೇ ಶೇ.22 ರಷ್ಟು ಕಡಿಮೆ ಕೊರತೆಯಾಗಿದೆ.
ಇದರಿಂದ ಜಿಲ್ಲೆಯ ಅಂತರ್ಜಲ ಮಟ್ಟ ಹಾಗೂ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿದ್ದು, ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿವೆ. ಆದ್ದರಿಂದ ಈಗಿನಿಂದಲೇ ನೀರಿನ ಸಮಸ್ಯೆ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗುರವಾರ ರಜತಾದ್ರಿಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಜಿಲ್ಲೆಯ ಕಾರ್ಕಳ, ಹೆಬ್ರಿ ಹಾಗೂ ಬ್ರಹ್ಮಾವರ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಈ ತಿಂಗಳಲ್ಲಿ ಅನಿರೀಕ್ಷಿತವಾಗಿ 44.1 ಮಿ.ಮೀ. ನಷ್ಟು ಮಳೆಯಾಗಿದ್ದು ಸ್ವಲ್ಪ ಕೊರತೆ ನೀಗಿದೆ. ಆದರೂ ಒಂದೊಮ್ಮೆ ಅನಿವಾರ್ಯವಾದರೆ ಟ್ಯಾಂಕರ್ ಮೂಲಕ ನೀರು ಒದಗಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಆದೇಶಿಸಿದರು.
ಹಡಿಲು ಭೂಮಿಯಲ್ಲಿ ಮೇವು ಬೆಳೆಸಿ: ಜಿಲ್ಲೆಯಲ್ಲಿ 2,25,000 ಕ್ಕೂ ಹೆಚ್ಚು ಜಾನುವಾರುಗಳಿದ್ದು, 2,41,925 ಟನ್‌ನಷ್ಟು ಮೇವು ಲಭ್ಯವಿದೆ. ರೈತರಿಗೆ ಪಶುಸಂಗೋಪನಾ ಇಲಾಖೆಯಿಂದ 1426 ಕಿಟ್‌ಗಳು ಹಾಗೂ ಕೆ.ಎಂ.ಎಫ್. ವತಿಯಿಂದ 3,000 ಕ್ಕೂ ಹೆಚ್ಚುಮೇವಿನ ಕಿಟ್ ವಿತರಿಸಲಾಗಿದೆ.
ಕೃಷಿ, ತೋಟಗಾರಿಕೆ ಇಲಾಖೆಯ ಫಾರ್ಮ್ ಗಳಲ್ಲಿ ಮೇವುಗಳನ್ನು ಬೆಳೆಸಬೇಕು. ಹಡಿಲು ಭೂಮಿಗಳಲ್ಲಿ ಮೇವು ಬೆಳೆಯಲು ರೈತರಿಗೆ ಅಥವಾ ಸಂಜೀವಿನಿ ಸಂಘದ ಸದಸ್ಯರುಗಳಿಗೆ ಪ್ರೋತ್ಸಾಹಿಸಬೇಕು ಎಂದರು.
ಸಭೆಯಲ್ಲಿ ಜಿಪಂ ಸಿಇಒ ಪ್ರಸನ್ನ ಎಚ್., ಎಎಸ್ಪಿ ಟಿ.ಎಸ್ ಸಿದ್ಧಲಿಂಗಪ್ಪ ಹಾಗೂ ಕೆ.ಎಸ್ ಹೆಗ್ಡೆ, ಕುಂದಾಪುರ ಎಸಿ ರಶ್ಮಿ ಎಸ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಹಸೀಲ್ದಾರ್‌ಗಳು, ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಮತ್ತಿತರರಿದ್ದರು.