ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ ‘ಚಕೋರ - ಸಾಹಿತ್ಯ ವಿಚಾರ ವೇದಿಕೆ ಉಡುಪಿ’ ಇದನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಿಮರ್ಶಕ ಮುರಳೀಧರ ಉಪಾಧ್ಯಾಯ ಹಿರಿಯಡಕ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ನಮ್ಮ ಪ್ರಜಾಸತ್ತೆಯ ಬದುಕಿಗೆ ದಾರಿದೀಪವಾದ ಸಂವಿಧಾನವನ್ನು ರಚಿಸಿಕೊಟ್ಟ ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ನೆಲದ ರೋಗಗಳ ಮೂಲವಾದ ಜಾತಿಯ ವಿನಾಶದಲ್ಲೇ ಈ ದೇಶದ ಏಳಿಗೆಯಿದೆ ಎಂದಿದ್ದರು ಮತ್ತು ಕನ್ನಡದ ನಿಜದನಿಯಾದ ಕುವೆಂಪು ಅವರು ಕೂಡ ‘ಚಾತುರ್ವಣ್ಯವನ್ನು ತಿದ್ದುವುದಲ್ಲ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು’ ಎಂದೇ ಪ್ರತಿಪಾದಿಸಿದರು ಎಂದು ವಿಮರ್ಶಕ ಮುರಳೀಧರ ಉಪಾಧ್ಯಾಯ ಹಿರಿಯಡಕ ಹೇಳಿದರು.ಅವರು ಇಲ್ಲಿನ ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ ‘ಚಕೋರ - ಸಾಹಿತ್ಯ ವಿಚಾರ ವೇದಿಕೆ ಉಡುಪಿ’ ಇದನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭ ‘ಕುವೆಂಪು ಕೃತಿಗಳಲ್ಲಿ ಸಮಾನತೆಯ ಆಶಯ’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ ಡಾ. ರೇಖಾ ವಿ. ಬನ್ನಾಡಿ, ‘ಜಲಗಾರ’ ನಾಟಕ ಪಠ್ಯವನ್ನು ವಿಶ್ಲೇಷಿಸುತ್ತಾ, ಕುವೆಂಪು ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಪಂಪನಿಂದ ತೊಡಗಿ, ಕಾಯಕ ಸಮಾನತೆಯ ಮೂಲಕವೇ ಮನುಷ್ಯ ಸಮಾನತೆಯನ್ನು ಸಾರಿದ ಶರಣರು, ತತ್ವಪದಕಾರರುಗಳ ನಿಜವಾರಸುದಾರರು ಮಾತ್ರವಲ್ಲ ನೆಲದ ಸಮುದಾಯಗಳೆಲ್ಲವನ್ನೂ ತಾಯ್ತನದ ಕರುಳಿಂದಲೇ ಪ್ರೀತಿಸಿದ ಗಾಂಧಿ ಮತ್ತು ಅಂಬೇಡ್ಕರ್ ಬಯಸಿದ ಅರ್ಥಪೂರ್ಣ ಪ್ರಜಾಸತ್ತೆಯ ಕನಸನ್ನು ಕಂಡ ಮನುಷ್ಯಲೋಕದ ಮಹತ್ವದ ಆಸ್ತಿಯೂ ಹೌದು ಎಂದರು.ಕಾಲೇಜಿನ ಪ್ರಾಂಶುಪಾಲ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ. ಜಯಪ್ರಕಾಶ್ ಶೆಟ್ಟಿ, ಅಕಾಡೆಮಿಯ ಕನಸಿನ ಕೂಸಾದ ‘ಚಕೋರ’ದ ಕಾರ್‍ಯಚಟುವಟಿಕೆಗಳ ಸ್ವರೂಪ ಮತ್ತು ಆಶಯಗಳನ್ನು ಪರಿಚಯಿಸಿದರು.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದ ಕಾರ್‍ಯಕ್ರಮದಲ್ಲಿ ಉಪಪ್ರಾಂಶುಪಾಲ ಪ್ರಕಾಶ್ ಪ್ರಭು, ವಿದ್ಯಾರ್ಥಿನಾಯಕ ಪ್ರಶಾಂತ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕ ದೇವದಾಸ ಪ್ರಭು ವಂದಿಸಿದರು. ಉಡುಪಿ ಜಿಲ್ಲೆಯ ಚಕೋರ ಬಳಗದ ಸಂಚಾಲಕಿ ಶಾಲಿನಿ ಯು.ಬಿ. ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.