ಪುರಿಜಗನ್ನಾಥನಂತೆ ಉಡುಪಿ ಕೃಷ್ಣಗೆ ನೈವೇದ್ಯ!

KannadaprabhaNewsNetwork |  
Published : Jul 12, 2026, 03:00 AM IST
ಉಡುಪಿ  | Kannada Prabha

ಸಾರಾಂಶ

ಅನ್ನಬ್ರಹ್ಮನೆಂದೇ ಕರೆಯಲ್ಪಡುವ ಉಡುಪಿ ಶ್ರೀಕೃಷ್ಣನಿಗೆ ಸೋದೆ ಮಠದ ಮುಂದಿನ ಪರ್ಯಾಯೋತ್ಸವ ಸಂದರ್ಭದಲ್ಲಿ ಪ್ರತಿನಿತ್ಯ ವರ್ಷದ 365 ದಿನವೂ ಸಾವಯವ ರೀತಿಯಲ್ಲಿ ಬೆಳೆದ ಬೇರೆ, ಬೇರೆ ತಳಿಯ ಅನ್ನ ನೈವೇದ್ಯ ಮಾಡಲು ‘ಶುದ್ಧ ನೈವೇದ್ಯ ಸಮರ್ಪಣಂ ಅಭಿಯಾನ’ ಯೋಜನೆ ರೂಪಿಸಲಾಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ವರ್ಷದ 365 ದಿನಗಳೂ ಪ್ರತಿದಿನ ಭಿನ್ನವಾದ ಭತ್ತದ ತಳಿಯನ್ನು ಬಳಸಿ ನೈವೇದ್ಯ (ಮಹಾಪ್ರಸಾದ) ತಯಾರಿಸಲಾಗುತ್ತದೆ. ಇದರ ಮಾದರಿಯಲ್ಲೇ ಅನ್ನಬ್ರಹ್ಮನೆಂದೇ ಕರೆಯಲ್ಪಡುವ ಉಡುಪಿ ಶ್ರೀಕೃಷ್ಣನಿಗೆ ಸೋದೆ ಮಠದ ಮುಂದಿನ ಪರ್ಯಾಯೋತ್ಸವ ಸಂದರ್ಭದಲ್ಲಿ ಪ್ರತಿನಿತ್ಯ ವರ್ಷದ 365 ದಿನವೂ ಸಾವಯವ ರೀತಿಯಲ್ಲಿ ಬೆಳೆದ ಬೇರೆ, ಬೇರೆ ತಳಿಯ ಅನ್ನ ನೈವೇದ್ಯ ಮಾಡಲು ‘ಶುದ್ಧ ನೈವೇದ್ಯ ಸಮರ್ಪಣಂ ಅಭಿಯಾನ’ ಯೋಜನೆ ರೂಪಿಸಲಾಗಿದೆ.

ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಇಂತಹ ಪ್ರಸಾದ ಯೋಜನೆಯೊಂದು ರೂಪುಗೊಂಡಿದೆ. ದಕ್ಷಿಣ ಭಾರತದಲ್ಲಿ ಅನ್ನಬ್ರಹ್ಮ ಎಂದೇ ಪ್ರಖ್ಯಾತನಾದ ಉಡುಪಿಯ ಕೃಷ್ಣನಿಗೆ ಈ ನೈವೇದ್ಯ ಸಮರ್ಪಣೆ ಮಾಡಿದರೆ ಹೇಗೆ ಎಂಬ ಕನಸು ಚಿಗುರಿದ್ದು ಹಾದಿಗಲ್ಲು ‘ನಡುವಿನಮನೆ ಸಂಸ್ಥಾನಂ’ ಅಭಯಲಕ್ಷ್ಮೀನೃಸಿಂಹ ದೇವಸ್ಥಾನದ ಧರ್ಮದರ್ಶಿ, ಸಂಸ್ಕೃತಿ ಚಿಂತಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರಲ್ಲಿ. ಅದಕ್ಕೆ ಕಸುವು ತುಂಬಿದ್ದು ಕೃಷಿ ಪ್ರಯೋಗ ಪರಿವಾರದ ಕಾರ್ಯಕರ್ತರಾದ ಸರು ದಿನೇಶ್‌, ಅರುಣ, ಚಕ್ಕೋಡಬೈಲು ಶ್ರೀವತ್ಸ. ಇವರೊಡನೆ ಕೈ ಜೋಡಿಸಿದವರು ಆ.ಶ್ರೀ.ಆನಂದ ಮತ್ತು ಕಾರ್ಕಳ ಶ್ರೀನಿವಾಸ ಭಟ್‌.

ಅನ್ನಬ್ರಹ್ಮ ಉಡುಪಿ ಶ್ರೀಕೃಷ್ಣನಿಗೆ ದಿನಕ್ಕೊಂದು ತಳಿ ನೈವೇದ್ಯ ಸಮರ್ಪಣೆಯ ಕನಸು ನನಸು ಮಾಡಲು ಪರಮಾನುಗ್ರಹ ಮಾಡಿದವರು ತ್ರೈಲೋಕ್ಯಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು. ಶ್ರೀಗಳು ಧರ್ಮ, ಸಂಸ್ಕೃತಿ, ಶಿಕ್ಷಣ, ಕಲೆ, ಕೃಷಿ, ಗೋಸೇವೆ... ಹೀಗೆ ಹಲವು ಮುಖದಲ್ಲಿ ಈಶ ಮತ್ತು ದೇಶ ಸೇವೆಯಲ್ಲಿ ತೊಡಗಿದ್ದಾರೆ.

2022ರಲ್ಲಿಯೇ ಸಾವಯವ ರೈತರಿಗೆ ಬೊಗಸೆ ಬೀಜ ಪ್ರದಾನ ಮಾಡಿ, ನೀವು ಬೆಳೆಯಿರಿ, ನಿಮ್ಮೊಡನೆ ನಾವಿದ್ದೇವೆ ಎಂದು ಶ್ರೀಗಳು ನೀಡಿದ ಭರವಸೆ ರೈತರಲ್ಲಿ ಹುಮ್ಮಸ್ಸು ತುಂಬಿತು. 2028-30ರ ಸೋದೆ ಪರ್ಯಾಯದಲ್ಲಿ ‘ಶುದ್ಧ ನೈವೇದ್ಯ ಸಮರ್ಪಣೆ’ ಕಾರ್ಯಕ್ರಮ ನಡೆಸಬೇಕೆಂಬ ಆಶಯ ಹೊತ್ತಿದ್ದಾರೆ.

2026ರ ಮೇ 28ರಂದು ಉಡುಪಿ ಸೋದೆ ಮಠದಲ್ಲಿ ಶಿವಮೊಗ್ಗ, ಉಡುಪಿ, ಮಂಗಳೂರು, ಉತ್ತರ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಬೆಳಗಾವಿ, ಹಾಸನ, ಮಂಡ್ಯ...ಹೀಗೆ ಹತ್ತು ಹಲವು ಜಿಲ್ಲೆಗಳ ಇನ್ನೂರಕ್ಕೂ ಹೆಚ್ಚು ಸಾವಯವ ರೈತರಿಗೆ ಬೊಗಸೆ ಬೀಜ ಪ್ರದಾನ ಮಾಡಿ, ನೀವು ಬೆಳೆದ ಬೆಳೆಗೆ ’ಗದ್ದೆಯಿಂದ ಗರ್ಭಗುಡಿಗೆ’ ಪ್ರವೇಶಿಸುವ ಮೂಲಕ ಭಗವದರ್ಪಣೆಯ ಭಾಗ್ಯ ದೊರೆವುದೆಂದು ಹರಸಿದರು. ಈ ಯೋಜನೆ ಸಫಲವಾಗಲು ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಾದಯಾತ್ರೆ ಮಾಡುವುದಾಗಿಯೂ ಘೋಷಿಸಿದ್ದು, ಸಾವಯವ ಕೃಷಿಕರ ಉತ್ಸಾಹವನ್ನು ಇಮ್ಮಡಿಸಿತು.

ಸೋದೆ ಶ್ರೀ ವಾದಿರಾಜ ಮಠದ ಪೀಠಾಧಿಪತಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ದೇಸಿ ತಳಿಯ ಭತ್ತ ಸಂರಕ್ಷಣೆಗಾಗಿ ಹಳ್ಳಿಹಳ್ಳಿಗಳಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ರೈತರಿದ್ದಲ್ಲಿಗೇ ತೆರಳಿ ‘ನೀವು ಬೆಳೆದು ತನ್ನಿ ಅನ್ನಬ್ರಹ್ಮನಿಗೆ ಸಮರ್ಪಿಸಿ ಧನ್ಯರಾಗಿ’ ಎಂಬ ಕರೆಯೊಂದಿಗೆ ಜು.12ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಳವಂಕ ಮತ್ತು ಜು.13ರಂದು ತೀರ್ಥಹಳ್ಳಿ ತಾಲೂಕಿನ ಅರಳಸುರುಳಿಯಲ್ಲಿ ಮಧ್ಯಾಹ್ನ 3.30ರಿಂದ ಪಾದಯಾತ್ರೆ ಮಾಡಲಿದ್ದಾರೆ. ಇದರಲ್ಲಿ ಹಲವಾರು ಸಂಘಟನೆಗಳು ಕೈ ಜೋಡಿಸಿದ್ದು, ಇದರಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದಾರೆ.

ಗದ್ದೆಯಿಂದ ಗರ್ಭಗುಡಿಗೆ ಶುದ್ಧ ನೈವೇದ್ಯ ಸಮರ್ಪಣಂ ಘೋಷಣೆಯಡಿ ನಡೆಯುವ ಈ ಪಾದಯಾತ್ರೆಗೆ ಉತ್ತಮ ಸ್ಪಂದನೆ ಸಿಗಲಿದೆ ಎಂದು ಇದರ ಹೊಣೆ ಹೊತ್ತ ಹಾದಿಗಲ್ಲು ಲಕ್ಷ್ಮೀ ನಾರಾಯಣ ಅವರು ತಿಳಿಸಿದ್ದಾರೆ.

ದಕ್ಷಿಣ ಭಾರತದಲ್ಲೇ ಮೊದಲೆನಿಸುವ ಈ ಯೋಜನೆಯ ಯಶಸ್ಸು ಸಾವಯವ ರೈತರನ್ನು ಅವಲಂಬಿಸಿದ್ದು, ಆಹಾರ ಬೆಳೆವ ಭೂಮಿ ಕಡಿಮೆಯಾಗಿ ವಾಣಿಜ್ಯ ಬೆಳೆಯತ್ತ ರೈತರು ಮುಖಮಾಡಿರುವ ಈ ವಿಕಟ ಸಂದರ್ಭದಲ್ಲಿ ರೈತ ಜಾಗೃತಿಯ ಪಾದಯಾತ್ರೆ ಅದೂ ಯತಿಯೊಬ್ಬರ ನೇತೃತ್ವದಲ್ಲಿ ಎಂಬುದು ‘ಧರ್ಮ ಎಂದರೆ ಕೇವಲ ವಿಚಾರವಲ್ಲ ಅದು ಆಚಾರ’ವೆಂಬುದನ್ನು ನಿರೂಪಿಸುತ್ತದೆ ಎಂಬುದು ಅತಿಶಯೋಕ್ತಿಯಲ್ಲ ಎನ್ನುತ್ತಾರೆ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ್ ಅದಾಲತ್; ಅತ್ಯಂತ ವೇಗದ ಶಾಶ್ವತ ಪರಿಹಾರ: ನ್ಯಾಯಾಧೀಶ ಸಿದ್ದಲಿಂಗ ಪ್ರಭು
ಜನರಿಗೆ ಕಲಾಭವನ ಮುಕ್ತ ಮಾಡಲು ಹೋರಾಟ ಸಮಿತಿ