ಬಳ್ಳಾರಿ: ಲೋಕ್ ಅದಾಲತ್ ಸಾರ್ವಜನಿಕರಿಗೆ ಶೀಘ್ರ, ಉಚಿತ, ಸೌಹಾರ್ದಯುತ ನ್ಯಾಯ ಒದಗಿಸುವ ವ್ಯವಸ್ಥೆಯಾಗಿದೆ. ವ್ಯಾಜ್ಯವಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಒಂದನೇ ಮಹಡಿಯ ವಿಡಿಯೋ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಉದ್ದೇಶಿಸಿ ಅವರು ಮಾತನಾಡಿದರು.ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆಯ ಅತ್ಯಂತ ಪ್ರಮುಖ ಹಾಗೂ ಜನಪ್ರಿಯ ವೇದಿಕೆಯಾಗಿ ಹೊರಹೊಮ್ಮಿರುವ "ರಾಷ್ಟ್ರೀಯ ಲೋಕ ಅದಾಲತ್ " ದೇಶಾದ್ಯಂತ ನಡೆಯುತ್ತಿದೆ. ಎಲ್ಲರಿಗೂ ನ್ಯಾಯ, ಶೀಘ್ರ ನ್ಯಾಯ, ಉಚಿತ ನ್ಯಾಯ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಕಕ್ಷಿದಾರರಿಗೆ ಸುದೀರ್ಘ ಕೋರ್ಟ್ ಪ್ರಕ್ರಿಯೆಗಳಿಂದ ಮುಕ್ತಿ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಸಾಮಾನ್ಯ ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೇ ನಡೆಯುವ ಪ್ರಕರಣಗಳಿಗೆ ಅದಾಲತ್ ನಲ್ಲಿ ಸುದೀರ್ಘ ವಾದ-ಪ್ರತಿವಾದಗಳಿಲ್ಲದೆ, ಉಭಯ ಪಕ್ಷಕಾರರ ಪರಸ್ಪರ ಒಪ್ಪಂದದೊಂದಿಗೆ ಒಂದೇ ದಿನದಲ್ಲಿ ಅತ್ಯಂತ ವೇಗವಾಗಿ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.ಇಂದಿನ ಅದಾಲತ್‌ನಲ್ಲಿ 36,188 ಬಾಕಿ ಇರುವ ಪ್ರಕರಣಗಳ ಪೈಕಿ, 8,882 ಪ್ರಕರಣಗಳನ್ನು ಲೋಕ ಅದಾಲತ್‌ಗೆ ಉಲ್ಲೇಖಿಸಲಾಗಿದೆ. ಇದರಲ್ಲಿ 4,957 ಪ್ರಕರಣಗಳು ಸೌಹಾರ್ದಯುತ ರಾಜಿಗೆ ಸಿದ್ಧಗೊಂಡಿವೆ ಎಂದರು.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎ. ಮೋಹನ್ ಮಾತನಾಡಿ, ಅದಾಲತ್‌ಗೆ ಯಾವುದೇ ನ್ಯಾಯಾಲಯದ ಶುಲ್ಕವಿಲ್ಲ. ಈಗಾಗಲೇ ಪಾವತಿಸಲಾದ ಕೋರ್ಟ್ ಫೀ ಇದ್ದಲ್ಲಿ ಪ್ರಕರಣ ರಾಜಿಯಾದ ನಂತರ ಸಂಪೂರ್ಣ ಶುಲ್ಕವನ್ನು ಪಕ್ಷಕಾರರಿಗೆ ಮರುಪಾವತಿಸಲಾಗುತ್ತದೆ. ಅದಾಲತ್ ನೀಡುವ ತೀರ್ಪು ಸಿವಿಲ್ ನ್ಯಾಯಾಲಯದ ತೀರ್ಪಿಗೆ ಸಮನಾಗಿರುತ್ತದೆ. ಇದರ ವಿರುದ್ಧ ಯಾವುದೇ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಇದರಿಂದ ಪ್ರಕರಣಕ್ಕೆ ಅಲ್ಲಿಗೇ ಶಾಶ್ವತ ಮುಕ್ತಿ ಸಿಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್. ಹೊಸಮನೆ ಮಾತನಾಡಿ, ಲೋಕ್ ಅದಾಲತ್‌ನಲ್ಲಿ ಯಾರದೇ ಸೋಲು-ಗೆಲುವು ಇರುವುದಿಲ್ಲ. ಇಬ್ಬರೂ ಒಟ್ಟಿಗೆ ಕುಳಿತು ಸಂಧಾನ ಮಾಡಿಕೊಳ್ಳುವುದರಿಂದ ಇಬ್ಬರಿಗೂ ಜಯ ಸಿಗುತ್ತದೆ. ಇದು ಸಮಾಜ ಮತ್ತು ಕುಟುಂಬಗಳಲ್ಲಿ ಸೌಹಾರ್ದ ಕಾಪಾಡಲು ನೆರವಾಗುತ್ತದೆ. ಇಲ್ಲಿ ಸಿವಿಲ್ ಪ್ರೊಸೀಜರ್ ಕೋಡ್ ಅಥವಾ ಸಾಕ್ಷ್ಯ ಕಾಯ್ದೆಯಂತಹ ಕಠಿಣ ಕಾನೂನು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿಲ್ಲ. ಪಕ್ಷಕಾರರು ಯಾವುದೇ ಭಯವಿಲ್ಲದೇ ನೇರವಾಗಿ ಸಂಧಾನಕಾರರೊಂದಿಗೆ ಮುಕ್ತವಾಗಿ ಮಾತನಾಡಬಹುದು ಎಂದು ಅವರು ವಿವರಿಸಿದರು. ಈ ವೇಳೆ ಜಿಲ್ಲಾ ನ್ಯಾಯಾಲಯದ ಅಧಿಕಾರಿ- ಸಿಬ್ಬಂದಿ ಇದ್ದರು.