ಧಾರವಾಡ
ಇನ್ನೇನು ವಿವಾಹ ವಿಚ್ಛೇದನಕ್ಕೆ ಸಿದ್ಧವಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದ 15 ದಂಪತಿ ಮನಸ್ಸು ಬದಲಾಯಿಸಿ, ಮರು ಜೀವನ ಕಟ್ಟಿಕೊಳ್ಳಲು ತೀರ್ಮಾನಿಸಿರುವ ಅಪರೂಪದ ಘಟನೆಗೆ ರಾಷ್ಟ್ರೀಯ ಲೋಕ ಅದಾಲತ್ ಸಾಕ್ಷಿಯಾಗಿದೆ.ಇಲ್ಲಿಯ ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ಸರ್ಕಾರಿ ಅಭಿಯೋಜಕರು, ನ್ಯಾಯವಾದಿಗಳು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಈ ದಂಪತಿಗಳನ್ನು ಒಗ್ಗೂಡಿಸಲು ಮಾಡಿದ ನಿರಂತರ ಪ್ರಯತ್ನ ಕೊನೆಗೂ ಫಲಿಸಿದೆ. ಪರಸ್ಪರ ಹೂ ಮಾಲೆ ಹಾಕಿಕೊಂಡು ಸಿಹಿ ತಿನ್ನಿಸುವ ಮೂಲಕ 15 ಜೋಡಿ ದಾಂಪತ್ಯಕ್ಕೆ ಹೊಸ ಹೆಜ್ಜೆ ಇರಿಸಿದ್ದು ಸ್ಮರಣೀಯ.
ಕೆಲವು ದಂಪತಿ ಮೂರು ತಿಂಗಳು, ಇನ್ನು ಕೆಲ ದಂಪತಿ 5 ವರ್ಷ ಮತ್ತೆ ಕೆಲವರು 10ರಿಂದ 15 ವರ್ಷಗಳ ಕಾಲ ದೂರವಿದ್ದು, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ನಾಗರಾಜಪ್ಪ ಯಮನೂರ ಅವರ ಮನವೊಲೈಕೆಗೆ ಒಪ್ಪಿ ಪುನಃ ದಾಂಪತ್ಯ ಜೀವನ ನಡೆಸುವುದಾಗಿ ತೀರ್ಮಾನಿಸಿದರು.ಜಿಲ್ಲಾ ನ್ಯಾಯಾಧೀಶರಾದ ಎನ್.ಬಿ. ವಿಜಯ ಮಾತನಾಡಿ, ಜೀವನ ಕ್ಷಣಿಕ. ಬದುಕು ಬಹಳ ದೊಡ್ಡದಿದೆ. ಹೀಗಾಗಿ ಸಣ್ಣ-ಪುಟ್ಟ ಸಮಸ್ಯೆಗಳು ಹಿರಿಯರ ಸಮ್ಮುಖದಲ್ಲಿ ಪರಿಹರಿಸಿಕೊಂಡು, ಚೆನ್ನಾಗಿ ಜೀವಿಸುವಂತೆ ಶುಭ ಹಾರೈಸಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ನಾಗರಾಜ ಯಮನೂರ, ಸಣ್ಣ ಪುಟ್ಟ ವಿಚಾರಗಳಿಗಾಗಿ ವರ್ಷಾನುಗಟ್ಟಲೇ ಬೇರೆಯಾಗಿ ಜೀವನ ನಡೆಸಿರುವುದು ಸಾಕು. ಬದುಕಿನಲ್ಲಿ ನಡೆದ ಕಹಿ ಘಟನೆಗಳು ಮರೆತು ಹೊಸ ಜೀವನ ನಡೆಸುವುದು ಸೇರಿದಂತೆ ಇನ್ಮುಂದೆ ಯಾವುದೇ ರೀತಿ ಸಮಸ್ಯೆ ಬಂದರೂ ತಮ್ಮಲ್ಲಿಯೇ ಸಮಸ್ಯೆಗೆ ಪರಿಹಾರ ಪಡೆಯಬೇಕು. ಯಾವುದೇ ಕಾರಣಕ್ಕೂ ನ್ಯಾಯಾಲಯದ ಮೆಟ್ಟಿಲು ಏರಬೇಡಿ. ಮನಸ್ಥಾಪ ಮಾಡಿಕೊಳ್ಳಬೇಡಿ ಎಂಬ ಸಲಹೆ ನೀಡಿದರು.
ಧಾರವಾಡ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ನೇಗಿನಹಾಳ ಮಾತನಾಡಿ, ದಾಂಪತ್ಯದ ಸಣ್ಣ-ಪುಟ್ಟ ಸಮಸ್ಯೆಗೆ ಕೋರ್ಟ್ ಮೆಟ್ಟಿಲು ಏರಬಾರದು. ಒಂದಾದ ದಂಪತಿಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದರು.
ನ್ಯಾಯಾಲಯದಲ್ಲಿ ಒಂದಾದ 15 ದಂಪತಿ ಹಾಗೂ ಅವರ ಮಕ್ಕಳು, ಸಂಬಂಧಿಕರಿಗೆ ಇದೇ ಸಂದರ್ಭದಲ್ಲಿ ನ್ಯಾಯಾಲಯದ ಪರವಾಗಿ ಊಟ ಸಹ ಮಾಡಿಸಿದ್ದು ವಿಶೇಷ.