ಹುಬ್ಬಳ್ಳಿ:

ಅಪ್ರಾಪ್ತ ಬಾಲಕಿ (14 ವರ್ಷ) ಹೆಣ್ಣು ಮಗುವಿಗೆ ಜನ್ಮನೀಡಿದ ಆಘಾತಕಾರಿ ಘಟನೆಯೊಂದು ನಗರ ಕೆಎಂಸಿಆರ್‌ಐನಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಬಾಲಕಿಯನ್ನು ಅಪಹರಿಸಿ ದೈಹಿಕ ಸಂಪರ್ಕ ನಡೆಸಿ ಮಗುವಿನ ಜನ್ಮಕ್ಕೆ ಕಾರಣವಾದ ವ್ಯಕ್ತಿಯ ವಿರುದ್ಧ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಾಲಕಿ ಗರ್ಭಿಣಿ ಆಗಿರುವ ಮಾಹಿತಿ ತಿಳಿಸದೆ ಚಿಕಿತ್ಸೆ ನೀಡಿ ಮುಚ್ಚಿಟ್ಟಿರುವ ಕಲಘಟಗಿಯ ಚಳಮಟ್ಟಿ ಗ್ರಾಮದ ವೈದ್ಯ ಹಾಗೂ ಹುಬ್ಬಳ್ಳಿ ಖಾಸಗಿ ನರ್ಸಿಂಗ್ ಹೋಮ್‌ನ ಮೂವರು ವೈದ್ಯರ ವಿರುದ್ಧವೂ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ದೀಪಾ ಜಾವೂರ ದೂರು ಸಲ್ಲಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?

ಕೆಲ ದಿನಗಳ ಹಿಂದೆ ಬಾಲಕಿಗೆ ಮನೆಯಲ್ಲಿಯೇ ಹೆರಿಗೆಯಾಗಿ ತೀವ್ರ ರಕ್ತಸ್ರಾವವಾಗಿದೆ. ಇದರಿಂದ ಆತಂಕಗೊಂಡ ಪಾಲಕರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿಆರ್‌ಐಗೆ ಜು. 8ರಂದು ದಾಖಲಿಸಿದ್ದಾರೆ. ವೈದ್ಯರು ಬಾಲಕಿಯ ದಾಖಲೆ ಪರಿಶೀಲಿಸಿದಾಗ ಅನುಮಾನಗೊಂಡಿದ್ದಾರೆ. ಶನಿವಾರ ಬಾಲಕಿ ಅಪ್ರಾಪ್ತೆ ಎಂಬುದು ತಿಳಿಯುತ್ತಿದ್ದಂತೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ದೂರಿನಲ್ಲಿ ಏನಿದೆ?


ಒಂದು ವರ್ಷದ ಹಿಂದೆ ಯುವಕನೊಬ್ಬ ಬಾಲಕಿಯನ್ನು ಅಪಹರಿಸಿ ಮನೆಯೊಂದರಲ್ಲಿ ಬಲವಂತವಾಗಿ ಕೂಡಿಹಾಕಿ ದೈಹಿಕ ಸಂಪರ್ಕ ನಡೆಸಿ, ಗರ್ಭಿಣಿ ಮಾಡಿ ಪರಾರಿಯಾಗಿದ್ದ. ಬಾಲಕಿ ಮನೆಗೆ ಬಂದು ಹೆತ್ತವರಿಗೆ ವಿಷಯ ತಿಳಿಸಿದ್ದಳು. ಕಲಘಟಗಿ ತಾಲೂಕಿನ ಗ್ರಾಮವೊಂದರ ವೈದ್ಯರೊಬ್ಬರ ಬಳಿ ಬಾಲಕಿಯನ್ನು ತೋರಿಸಿದ್ದು, ಅವರ ಸಲಹೆಯಂತೆ ಹುಬ್ಬಳ್ಳಿ ನಗರದ ನರ್ಸಿಂಗ್‌ ಹೋಮ್‌ಗೆ ತೋರಿಸಲಾಗಿತ್ತು. ಅಪ್ರಾಪ್ತಳು ಗರ್ಭಿಣಿಯಾಗಿರುವುದು ಗೊತ್ತಿದ್ದರೂ ವೈದ್ಯರು ಮುಚ್ಚಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೋಟ್‌...

ಬಾಲಕಿಯ ದಾಖಲೆ ಪರಿಶೀಲಿಸಿದ್ದಾಗ ಅವಳಿಗೆ 14 ವರ್ಷ 3 ತಿಂಗಳು ಆಗಿರುವುದು ಗಮನಕ್ಕೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅವರು ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದಿದ್ದಾರೆ. ಇದೀಗ ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು, ತಾಯಿ ಅಪ್ರಾಪ್ತಳಾಗಿರುವ ಹಿನ್ನೆಲೆಯಲ್ಲಿ ನಿರ್ಭಯಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಡಾ. ರಾಜಶೇಖರ ದ್ಯಾಬೇರಿ, ಕೆಎಂಸಿ-ಆರ್‌ಐ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ

ಬಾಲಕಿಗೆ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿಯ ಹೆತ್ತವರ ಸಹಾಯದಿಂದ ಆರೋಪಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅಪ್ರಾಪ್ತೆಯ ಮಗುವಿನ ಜನನಕ್ಕೆ ಕಾರಣನಾದವನು, ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧವೂ ಪ್ರಕರಣ ದಾಖಲಿಸಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಶ್ರುತಿ ಎನ್‌.ಎಸ್‌. ಹು-ಧಾ ಡಿಸಿಪಿ